ಬೆಳಗಾವಿ : ಹಳೆ ಪಿಂಚಣಿ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಹಳೆ ಪಿಂಚಣಿ ಜಾರಿ ಸಂಬಂಧ ಶೀಘ್ರವೇ ಸಮಿತಿ ಪುನರ್ ರಚನೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಬಿಜೆಪಿ ಎಸ್.ವಿ. ಸಂಕನೂರು, ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಸಿಎಂ ಪರವಾಗಿ ಉತ್ತರಿಸಿದ ಸಚಿವರು, ಹಳೆ ಪಿಂಚಣಿ ಯೋಜನೆ (OPS) ಪುನಃ ಜಾರಿಗೆ ತರುವ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ರಚಿಸಿದ್ದ ಸಮಿತಿಯನ್ನು ಶೀಘ್ರವೇ ಪುನರ್ ರಚಿಸಲಾಗುವುದು ಎಂದು ತಿಳಿಸಿದ್ದಾರೆ.
ನೂತನ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಿಂದಿನ ಒಪಿಎಸ್ ಜಾರಿ ಮಾಡಿರುವ ರಾಜ್ಯಗಳಲ್ಲಿ ಅಧ್ಯಯನ ಮಾಡಬೇಕು. ಕೇಂದ್ರ ಸರ್ಕಾರದ ಜೊತೆಗೆ ಸಭೆ ನಡೆಸುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಹಳೆ ಪಿಂಚಣಿ ವ್ಯವಸ್ಥೆ ಅಡಿ ಸರ್ಕಾರ ಪಾವತಿಸಿದ ಭವಿಷ್ಯ ನಿಧಿ (ಪಿಎಫ್) ವಾಪಸ್ ಕೊಡಲು ಕಾನೂನಿನ ಅಡ್ಡಿ ಇದೆ. ಆದರೂ ಸರ್ಕಾರ ಸರ್ಕಾರಿ ನೌಕರರ ಹಿತ ಕಾಪಾಡಲು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.