ಬೆಂಗಳೂರು : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023-24ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಸಮುದಾಯದವರಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಮುದಾಯವದವರು ಕನಿಷ್ಟ 10 ವರ್ಷ ರಾಜ್ಯದಲ್ಲಿ ವಾಸವಾಗಿರಬೇಕು. 18 ರಿಂದ 55 ವರ್ಷ ವಯೋಮಿತಿಯುಳ್ಳ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.
ಸಾಂತ್ವನ ಯೋಜನೆ:
ಸಾಂತ್ವನ ಯೋಜನೆಯಡಿ ರಾಜ್ಯದಲ್ಲಿ ಗಲಭೆ ಮತ್ತು ಹಿಂಸಾಚಾರದ ಸಂದರ್ಭಗಳಲ್ಲಿ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮಮನೆಗಳು ನಾಶ ಅಥವಾ ಹಾನಿಗೊಳಗಾಗಿದ್ದರೆ ಅಂತಹ ಪ್ರಕರಣಗಳಲ್ಲಿ ಕನಿಷ್ಠ ರೂ.2 ಲಕ್ಷ ನಷ್ಟವಾಗಿದ್ದರೆ ಸಾಲ ಸೌಲಭ್ಯ ಒದಗಿಸಲಾಗುವುದು. ಮೇಲ್ಕಂಡಂತೆ ಎರಡು ವರ್ಗಗಳ ರಾಜ್ಯದಲ್ಲಿನ ವಿಶೇಷ/ದುರ್ಬಲ ವರ್ಗದ ಫಲಾನುಭವಿಗಳಿಗೆ ಗರಿಷ್ಠ ರೂ.5 ಲಕ್ಷಗಳ ಘಟಕ ವೆಚ್ಚಕ್ಕೆ ಶೇ.50 ರಷ್ಟು ಸಹಾಯಧನ ಮತ್ತು ಶೇ.3 ರ ಬಡ್ಡಿದರದಲ್ಲಿ ಶೇ.50 ರಷ್ಟು ಸಾಲ ಒದಗಿಸಲಾಗುವುದು.
ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಫಲಾನುಭವಿಗಳು ರಾಜ್ಯದ ಮತೀಯ ಅಲ್ಪಸಂಖ್ಯಾತರಾಗಿರಬೇಕು. ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ.8 ಲಕ್ಷ ಮೀರಿರಬಾರದು. ಸಂತ್ರಸ್ತರಾದ ಫಲಾನುಭವಿಗಳು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ವರದಿಯನ್ನು ಪಡೆದಿರಬೇಕು. ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಯಾರೊಬ್ಬರೂ ಕೇಂದ್ರ ಅಥವಾ ರಾಜ್ಯ ಸರ್ಕಾರ ನೌಕರಿಯಲ್ಲಿರಬಾರದು. ಅರ್ಜಿದಾರರು ಅಥವಾ ಅವರ ಕುಟುಂಬದವರು ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಸಾಲ ಸೌಲಭ್ಯ ಪಡೆದಿರಬಾರದು(ಅರಿವು ಯೋಜನೆ ಹೊರತುಪಡಿಸಿ).
ಅರ್ಹ ಫಲಾನುಭವಿಗಳು ಚಾಲ್ತಿ ಸಾಲಿನ ಅಲ್ಪಸಂಖ್ಯಾತರ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಪ್ರತಿಗಳು, ಖಾತರಿ ನೀಡುವವರು ಸ್ವಯಂ ಘೋಷಣೆ ಪತ್ರ ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ, ಸ್ವಯಂ ಘೋಷಣೆ ಪತ್ರ, ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ತೀರ್ಪು/ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಈ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್‌ಸೈಟ್: kmdconilne.karnataka.gov.in ನಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ ಪಡಿಸಿರುವುದಿಲ್ಲ.
ಸಮುದಾಯ ಆಧಾರಿತ ತರಬೇತಿ ಯೋಜನೆ:
ನಿಗಮದ ವತಿಯಿಂದ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗ ಹೊಂದಿರುವ ಯುವಕ/ಯುವತಿಯರಿಗೆ ಸ್ವಂತ ಉದ್ಯೋಗ/ಕಚೇರಿ, ಕಂಪನಿ, ಕಾರ್ಖಾನೆಗಳಲ್ಲಿ ಉದ್ಯೋಗ ದೊರಕಿಸುವ ಸಲುವಾಗಿ ಮಾನ್ಯತೆ ಪಡೆದ ಕೇಂದ್ರಗಳೊಂದಿಗೆ ಬ್ಯೂಟಿ ಪಾರ್ಲರ್ ತರಬೇತಿ(ಪುರುಷ ಮತ್ತು ಮಹಿಳೆಯರಿಗೆ), ಹೆವಿ ಅರ್ಥ್ ಮೂವರ್ ತರಬೇತಿ(ಜೆಸಿಬಿ, ಕ್ರೇನ್, ಪೋಕ್ ಲೇನ್ ಸೇರಿದಂತೆ ಭಾರಿ ವಾಹನ ಚಾಲನಾ ತರಬೇತಿ), ಶಾರ್ಟ್ ಹ್ಯಾಂಡ್ ಟ್ರೈನಿಂಗ್, ಭದ್ರತಾ ಸೇವೆಗಳ ತರಬೇತಿಯನ್ನು ನೀಡಲಾಗುತ್ತದೆ.
ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಜಿದಾರರು ಅರ್ಜಿದಾರರು ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು. ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಎಲ್ಲ ಮೂಲಗಳಿಂದ ನಗರ ಪ್ರದೇಶದಲ್ಲಿ ರೂ.1,03,000 ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.96,000 ಗಿಂತ ಕಡಿಮೆಯಿರಬೇಕು. ಆಯ್ಕೆಯಾದ ಅರ್ಜಿದಾರರು ಕಡ್ಡಾಯವಾಗಿ ತರಬೇತಿಯನ್ನು ಪೂರ್ಣಗೊಳಿಸಿರಬೇಕು. ಕನಿಷ್ಟ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರಬೇಕು. ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳಲ್ಲಿ ತರಬೇತಿ ಪಡೆದಿರಬಾರದು.
ಫಲಾನುಭವಿಗಳು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಎಸ್‌ಎಸ್‌ಎಲ್‌ಸಿ/ಪಿಯುಸಿ/ಡಿಪ್ಲೊಮಾ/ಡಿಗ್ರಿ ಅಂಕಪಟ್ಟಿ, ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ/ಅಲ್ಪಸಂಖ್ಯಾತ ಪ್ರಮಾಣ ಪತ್ರ, ಸಮರ್ಥ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣ ಪತ್ರ, ಸ್ವಯಂ ಘೋಷಣೆ ಪತ್ರವನ್ನು ಸಲ್ಲಿಸಬೇಕು.
ಅರ್ಜಿಯನ್ನು ನಿಗಮದ ವೆಬ್‌ಸೈಟ್: kmdconilne.karnataka.gov.in ನಲ್ಲಿ ಡಿಸೆಂಬರ್ 15 ರೊಳಗೆ ಅರ್ಜಿ ಸಲ್ಲಿಸಬೇಕು.