ಬೆಂಗಳೂರು : ರಾಜ್ಯದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಯೋಜನೆಯಡಿ ಕಿಟ್ ವಿತರಣೆ ಮಾಡಲು ನಿರ್ಧರಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ನಡೆದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ರಾಜ್ಯದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಕೆಗಳ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಕಿಟ್ ನೀಡಲು ನಿರ್ಧರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಟೂತ್ ಪೇಸ್ಟ್, ಬ್ರಶ್, ಕೊಬ್ಬರಿ ಎಣ್ಣೆ, ಮೈಸೋಪು, ಬಟ್ಟೆ ಸೋಪು ಒಳಗೊಂಡ 93 ರೂ.ಗಳ ಕಿಟ್ ಹಾಗೂ ವಿದ್ಯಾರ್ಥಿನಿಯರಿಗೆ 135 ರೂ.ಗಳ ಕಿಟ್ ವಿತರಣೆ ಮಾಡಲು ನಿರ್ಧರಿಸಲಾಗಿದೆ.
ಕಿಟ್ ಗಳ ವಿತರಣೆಗೆ ವರ್ಷಕ್ಕೆ 90 ಕೋಟಿ ರೂ. ವೆಚ್ಚವಾಗಲಿದೆ. ಕಿಟ್ ನಲ್ಲಿನ ವಸ್ತುಗಳ ಗುಣಮಟ್ಟ ಹೆಚ್ಚಿಸಬೇಕು. 75 ಗ್ರಾಂಗಳ ಬದಲಿಗೆ 125 ಗ್ರಾಂ ಗಳ ಸೋಪು ಒದಗಿಸುವಂತೆ ಹಾಗೂ ಇದರಲ್ಲಿ ಕೇವಲ ಶೇ 5 ರಷ್ಟು ಮಾತ್ರ ಲಾಭ ಇಟ್ಟುಕೊಳ್ಳಬೇಕು” ಎಂದು ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸೂಚಿಸಿದರು.
ಟೂತ್ ಪೇಸ್ಟ್ ಪ್ರಮಾಣವನ್ನು ಹೆಚ್ಚಿಸುವಂತೆ ಹಾಗೂ ಹಲ್ಲುಜ್ಜುವ ಬ್ರಶ್ ಗಳ ಗುಣಮಟ್ಟ ಸೇರಿದಂತೆ ಇತರೆ ಗುಣಮಟ್ಟದ ವಸ್ತುಗಳನ್ನು ಮಕ್ಕಳಿಗೆ ಒದಗಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು