ಇತ್ತೀಚಿಗಷ್ಟೇ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದ್ದು, ಇದೀಗ ಕೇಂದ್ರ ಸರ್ಕಾರ, ಬ್ಯಾಂಕ್ ಉದ್ಯೋಗಿಗಳಿಗೂ ಗುಡ್ ನ್ಯೂಸ್ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಶೇಕಡಾ 15 ರಷ್ಟು ವೇತನ ಹೆಚ್ಚಳದ ಜೊತೆಗೆ ವಾರಕ್ಕೆ ಐದು ದಿನ ಕೆಲಸ ಮಾಡುವ ಅವಕಾಶವನ್ನು ನೀಡುವ ಸಾಧ್ಯತೆ ಇದೆ.
ಶೇಕಡ 15ರಷ್ಟು ವೇತನ ಹೆಚ್ಚಳ ಕುರಿತಂತೆ ಈಗಾಗಲೇ ಭಾರತೀಯ ಬ್ಯಾಂಕುಗಳ ಸಂಘ ಪ್ರಸ್ತಾವನೆ ಸಲ್ಲಿಸಿದ್ದು, ಬ್ಯಾಂಕುಗಳು ಮತ್ತು ನೌಕರರ ಒಕ್ಕೂಟದ ನಡುವೆ ಈ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಈ ಬೆಳವಣಿಗೆಯನ್ನು ಗಮನಿಸುತ್ತಿರುವ ಕೇಂದ್ರ ಹಣಕಾಸು ಸಚಿವಾಲಯ ಅಂತಿಮವಾಗಿ ಇದಕ್ಕೆ ಅಧಿಕೃತ ಮುದ್ರೆ ನೀಡಲಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ 2020ರಲ್ಲಿ ಬ್ಯಾಂಕ್ ಉದ್ಯೋಗಿಗಳ ವೇತನವನ್ನು ಏರಿಕೆ ಮಾಡಲಾಗಿದ್ದು, ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಉದ್ಯೋಗಿಗಳ ಮನೆಗೆಲ್ಲುವ ಸಲುವಾಗಿ ಕೇಂದ್ರ ಸರ್ಕಾರ ಅವರುಗಳ ಬೇಡಿಕೆಯನ್ನು ಈಡೇರಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಬ್ಯಾಂಕ್ ಹಾಗೂ ನೌಕರರ ಒಕ್ಕೂಟದ ನಡುವಿನ ಮಾತುಕತೆ ಫಲಪ್ರದವಾದ ಬಳಿಕ ದೀಪಾವಳಿ ವೇಳೆಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡಲಿದೆ ಎಂದು ತಿಳಿದು ಬಂದಿದೆ.