ನವದೆಹಲಿ: ಕೈಮಗ್ಗ, ಜವಳಿ, ಕೃಷಿ ಉತ್ಪನ್ನ, ರಸಗೊಬ್ಬರ, ಶೈಕ್ಷಣಿಕ ಸಾಮಗ್ರಿಗಳು ಸೇರಿ 100ಕ್ಕೂ ಹೆಚ್ಚು ವಸ್ತುಗಳ ಮೇಲಿನ ತೆರಿಗೆ ಪರಿಷ್ಕರಿಸಲು ಚಿಂತನೆ ನಡೆದಿದೆ.
ಗೋವಾದಲ್ಲಿ ನಡೆದ ಜಿಎಸ್‌ಟಿ ಮಂಡಳಿಯ ಆರು ಸಚಿವರ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ. ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲವು ಸರಕುಗಳ ಮೇಲೆ ವಿಧಿಸುತ್ತಿರುವ ಶೇಕಡ 12ರಷ್ಟು ಜಿಎಸ್‌ಟಿಯನ್ನು ಇಳಿಕೆ ಮಾಡುವ ಬಗ್ಗೆ ಸಚಿವರ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಅ. 20ರಂದು ನಿಗದಿಯಾದ ಸಭೆಯಲ್ಲಿ ಈ ಕುರಿತಾಗಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ನವೆಂಬರ್ ನಲ್ಲಿ ನಡೆಯಲಿರುವ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ಈ ಬಗ್ಗೆ ವರದಿ ಸಲ್ಲಿಸಲಾಗುವುದು. ಸಭೆಯಲ್ಲಿ ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೂಡ ಭಾಗವಹಿಸಿದ್ದರು.
ಪಶ್ಚಿಮ ಬಂಗಾಳದ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಈ ಬಗ್ಗೆ ಮಾಹಿತಿ ನೀಡಿ ಬೈಸಿಕಲ್ ಮತ್ತು ಬಾಟಲಿ ನೀರಿನ ತೆರಿಗೆ ಸರಳೀಕರಣದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಜನಸಾಮಾನ್ಯರು ಬಳಕೆ ಮಾಡುವ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಕೆಲವು ವಸ್ತುಗಳ ಮೇಲೆ ತೆರಿಗೆಯನ್ನು ಶೇಕಡ 5ಕ್ಕೆ ಇಳಿಸಿದರೆ ಜನರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಮತ್ತು ಔಷಧೀಯ ಸಾಮಗ್ರಿಗಳಿಗೆ ಶೇಕಡ 12ರಷ್ಟು ಜಿಎಸ್‌ಟಿ ವಿಧಿಸುತ್ತಿದ್ದು, ರೋಗಿಗಳಿಗೆ ತೊಂದರೆಯಾಗಿದೆ. ಇದನ್ನು ಕಡಿಮೆ ಮಾಡಲು ಚರ್ಚೆ ನಡೆದಿದೆ. ಆಹಾರ ಪದಾರ್ಥಗಳ ಬೆಲೆಯನ್ನು ಇದಕ್ಕೆ ಇಳಿಕೆ ಮಾಡಬೇಕು. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ಚಂದ್ರಿಮಾ ಭಟ್ಟಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.