ಪಣಜಿ: ಗೋವಾದ ಮಾಪುಸಾ ಮುನ್ಸಿಪಲ್ ಕೌನ್ಸಿಲ್ ನಲ್ಲಿ ಗೋಬಿ ಮಂಚೂರಿಯನ್ ನಿಷೇಧಿಸಲಾಗಿದೆ. ಯಾವುದೇ ಅಂಗಡಿಯವರು, ಬೀದಿ ವ್ಯಾಪಾರಿಗಳು ಗೋಬಿ ಮಂಚೂರಿ ಮಾರಾಟ ಮಾಡುವಂತಿಲ್ಲ.
ಮಾಪುಸಾ ಕೌನ್ಸಿಲರ್ ತಾರಕ್ ಅರೋಲ್ಕರ್ ಕಳೆದ ತಿಂಗಳು ಬೋರ್ಡ್ಗೆಶ್ವರ ದೇವಾಲಯ ಜಾತ್ರೆಯಲ್ಲಿ ಗೋಬಿ ಮಂಚೂರಿ ನಿಷೇಧಿಸುವಂತೆ ನೀಡಿದ್ದ ಸಲಹೆಯನ್ನು ಪರಿಷತ್ತಿನ ಉಳಿದ ಸದಸ್ಯರು ಒಪ್ಪಿಕೊಂಡಿದ್ದಾರೆ. ಸ್ವಚ್ಛತೆ ಇಲ್ಲದಿರುವುದು ಮತ್ತು ಗೋಬಿಮಂಚೂರಿಯಲ್ಲಿ ಸಿಂಥೆಟಿಕ್ ಬಣ್ಣ ಬಳಸುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಗೋಬಿ ಮಂಚೂರಿಗೆ ಬಳಸುವ ಸಿಂಥೆಟಿಕ್ ಬಣ್ಣ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಲ್ಲದೆ ಬಟ್ಟೆ ಒಗೆಯಲು ಬಳಸುವ ಪೌಡರ್ ಅನ್ನು ಕೂಡ ಹಿಟ್ಟಿನಲ್ಲಿ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಗೋಬಿ ಮಂಚೂರಿ ಹೆಚ್ಚು ಕಾಲ ಗರಿಗರಿಯಾಗಿರುತ್ತದೆ. ಈ ಕಾರಣಕ್ಕೆ ಗೋಬಿ ಮಂಚೂರಿ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.