ಬಡ್ತಿ ಬೇಕಾದರೆ ತನ್ನೊಂದಿಗೆ ಸಹಕರಿಸುವಂತೆ ಮಹಿಳಾ ಸಬ್ ಇನ್ಸ್ ಪೆಕ್ಟರ್ ರನ್ನು ಒತ್ತಾಯಿಸಿದ ಆರೋಪದ ಮೇಲೆ ಡಿ ಎಸ್ ಪಿ ಯನ್ನು ಅಮಾನತು ಗೊಳಿಸಿರುವ ಘಟನೆ ಬಿಹಾರದ ಕೈಮೂರ್‌ನಲ್ಲಿ ವರದಿಯಾಗಿದೆ.
ಬಡ್ತಿ ನೀಡುವಾಗ ಡಿಎಸ್‌ಪಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಮಹಿಳಾ ಎಸ್‌ಐ ಒಬ್ಬರು ಆರೋಪಿಸಿದ ಬಳಿಕ ತನಿಖೆಯಲ್ಲಿ ದೂರು ನಿಜವೆಂದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸ್ ಕೇಂದ್ರ ಕಚೇರಿಯು ಆರೋಪಿ ಡಿಎಸ್‌ಪಿಯನ್ನು ಅಮಾನತುಗೊಳಿಸಿದೆ. ಅಲ್ಲದೆ, ಆರೋಪಗಳ ವರದಿಯನ್ನು ಗೃಹ ಇಲಾಖೆಗೆ ಸಲ್ಲಿಸಲಾಗಿದೆ. ಇದೀಗ ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಡಿ ಎಸ್ ಪಿ ಫೈಜ್ ಅಹಮದ್ ಖಾನ್, ಮಹಿಳಾ ಎಸ್‌ಐ ಫೋನ್‌ಗೆ ಅಶ್ಲೀಲ ಸಂದೇಶಗಳನ್ನೂ ಕಳುಹಿಸಿದ್ದರು ಎಂದು ಗೊತ್ತಾಗಿದೆ. ಫೈಜ್ ಅಹಮದ್ ಖಾನ್ ವಿರುದ್ಧ ಆರೋಪ ಬಂದಾಗ ಅವರು ಮೊಹಾನಿಯಾ ಡಿಎಸ್ಪಿ ಆಗಿದ್ದರು. ಅಮಾನತುಗೊಂಡ ನಂತರ ಅವರನ್ನು ಪಾಟ್ನಾದ ಕೇಂದ್ರ ವಲಯದ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿ) ಕಚೇರಿಗೆ ಕಳಿಸಲಾಯಿತು.
ತನ್ನ ವರ್ಗಾವಣೆಯ ನಂತರವೂ ಆರೋಪಿ ಡಿಎಸ್ಪಿ ತನ್ನ ಮೊಬೈಲ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ, ಪದೇ ಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ಮಹಿಳಾ ಎಸ್‌ಐ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳಾ ಎಸ್ಐ ಗೆ ಬಡ್ತಿ ನೀಡಲು ಡಿಎಸ್‌ಪಿ 2023 ರಲ್ಲಿ ಲೈಂಗಿಕ ಶೋಷಣೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಜೂ.3ರಂದು ಆರೋಪಿ ಡಿಎಸ್ಪಿ ಲಿಖಿತ ಹೇಳಿಕೆ ನೀಡಿದ್ದು ಅದರ ನಂತರ, ಪೊಲೀಸ್ ಪ್ರಧಾನ ಕಚೇರಿಯು ತಪ್ಪಿತಸ್ಥ ಡಿಎಸ್ಪಿ ವಿರುದ್ಧದ ಆರೋಪಗಳ ವರದಿಯನ್ನು ಗೃಹ ಇಲಾಖೆಗೆ ಕಳುಹಿಸಿತು. ಆರೋಪಿ ಡಿಎಸ್ಪಿ ವಿರುದ್ಧ 10 ದಿನದೊಳಗೆ ಇಲಾಖಾ ಕ್ರಮ ಕೈಗೊಳ್ಳುವಂತೆ ಇಲಾಖೆ ಸೂಚನೆ ನೀಡಿದೆ.