ಕಾರವಾರ: ಶುಂಠಿ ದರ ಕ್ವಿಂಟಲ್ ಗೆ ಕೇವಲ 2 ಸಾವಿರ ರೂ.ಗೆ ಕುಸಿತ ಕಂಡಿದ್ದು, ರೈತರು ಕಂಗಾಲಾಗಿದ್ದಾರೆ. ಅತಿವೃಷ್ಟಿ, ರೋಗ ಬಾಧೆ ಇತರೆ ಸಂಕಷ್ಟದ ನಡುವೆಯೂ ಶುಂಠಿ ಬೆಳೆದ ರೈತರಿಗೆ ಈಗ ದರ ಕುಸಿತವಾಗಿರುವುದು ಆತಂಕ ತಂದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಮುಂಡಗೋಡ ಭಾಗದಲ್ಲಿ ಸುಮಾರು 250 ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತದೆ. ಈ ಬಾರಿ ಕೊಳೆರೋಗ, ಅತಿವೃಷ್ಟಿಯಿಂದಾಗಿ ಶೇಕಡ 50ರಷ್ಟು ಬೆಳೆ ಹಾನಿಯಾಗಿದೆ. ಅಳಿದುಳಿದ ಬೆಳೆ ಬಂದಿದ್ದು, ಉತ್ತಮ ಗುಣಮಟ್ಟದ ಶುಂಠಿಗೆ ಮಾರುಕಟ್ಟೆಯಲ್ಲಿ ಸಾಧಾರಣ ದರ ಕೂಡ ಸಿಗದಂತಾಗಿದೆ.
ಹೆಚ್ಚುವರಿ ಗೊಬ್ಬರ, ಔಷಧ ಸಿಂಪಡಿಸಿ ಉಳಿಸಿಕೊಂಡಿದ್ದ ಬೆಳೆ ಕಟಾವಿನ ಹಂತದಲ್ಲಿದ್ದು, ದರ ಕುಸಿತದಿಂದ ರೈತರಿಗೆ ಆತಂಕವಾಗಿದೆ. ಕಳೆದ ವರ್ಷ ಕ್ವಿಂಟಲ್ ಗೆ 9 ಸಾವಿರ ರೂಪಾಯಿ ಇದ್ದ ದರ ಈ ಬಾರಿ 2 ಸಾವಿರ ರೂ.ಗೆ ಕುಸಿದಿದೆ. ಖರ್ಚು ಮಾಡಿದ ಹಣ ಕೂಡ ಸಿಗದಂತಾಗಿದೆ.
ಬಿತ್ತನೆ ಶುಂಠಿಗೆ ಎಕರೆಗೆ 75,000 ರೂ. ಖರ್ಚು ಮಾಡಬೇಕು. ತುಂತುರು ನೀರಾವರಿ ಸೆಟ್ ಅಳವಡಿಸಬೇಕು. ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಕೀಟನಾಶಕ ಸಿಂಪಡಣೆ ಸೇರಿ ಲಕ್ಷಾಂತರ ರೂ. ಖರ್ಚು ಮಾಡಿದ್ದರೂ ದರ ಭಾರೀ ಕುಸಿತವಾಗಿದ್ದರಿಂದ ರೈತರಿಗೆ ಹಾಕಿದ ಬಂಡವಾಳ ಕೂಡ ಸಿಗದಂತಾಗಿದೆ.