ಛತ್ತೀಸ್ ಗಢದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಮದುವೆಗೆ ಉಡುಗೊರೆಯಾಗಿ ಬಂದಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಸ್ಫೋಟಗೊಂಡು ವರ ಸಾವನ್ನಪ್ಪಿದ ಪ್ರಕರಣದಲ್ಲಿ ನಿಜ ಸಂಗತಿ ಬಯಲಾಗಿದೆ.
ಪ್ರಕರಣವನ್ನ ಛತ್ತೀಸ್‌ಗಢ ಪೊಲೀಸರು ಭೇದಿಸಿದ್ದು ನವ ದಂಪತಿಯನ್ನು ಕೊಲ್ಲುವ ಉದ್ದೇಶದಿಂದ ಎಲೆಕ್ಟ್ರಾನಿಕ್ ಸಾಧನದಲ್ಲಿ ಬಾಂಬ್ ಇಟ್ಟಿದ್ದ ಆರೋಪದ ಮೇಲೆ ನವವಿವಾಹಿತೆಯ ಮಾಜಿ ಪ್ರೇಮಿಯನ್ನು ಬಂಧಿಸಿದ್ದಾರೆ.
ಮ್ಯೂಸಿಕ್ ಸಿಸ್ಟಂ ಸ್ಫೋಟಗೊಂಡ ನಂತರ ಮಹಿಳೆಯ ಪತಿ ಹೇಮೇಂದ್ರ ಮೆರಾವಿ (30) ಮತ್ತು ಅವರ ಸಹೋದರ ರಾಜ್‌ಕುಮಾರ್ (32) ಸಾವನ್ನಪ್ಪಿದ್ದರು. ಆರೋಪಿ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಛಾಪ್ಲಾ ಗ್ರಾಮದ ವಿವಾಹಿತ ವ್ಯಕ್ತಿ ಸರ್ಜು ಮಾರ್ಕಮ್ (33) ಮ್ಯೂಸಿಕ್ ಸಿಸ್ಟಂ ನ ಉಡುಗೊರೆಯಾಗಿ ನೀಡಿದ್ದ. .
ತನಿಖೆಯ ವೇಳೆ ಅಪರಾಧದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ ಮಂಗಳವಾರ ಬಾಲಘಾಟ್‌ನಿಂದ ಮರ್ಕಮ್ ನನ್ನು ಬಂಧಿಸಲಾಗಿದೆ ಎಂದು ಕಬೀರ್‌ಧಾಮ್ ಪೊಲೀಸ್ ವರಿಷ್ಠಾಧಿಕಾರಿ ಲಾಲ್ ಉಮೇದ್ ಸಿಂಗ್ ತಿಳಿಸಿದ್ದಾರೆ.
‘ಹೋಮ್ ಥಿಯೇಟರ್‌ನಲ್ಲಿ ಸ್ಫೋಟಕ ಇಟ್ಟು ಕೊಲೆ ಮಾಡುವ ಉದ್ದೇಶದಿಂದ ನವ ದಂಪತಿಗಳಿಗೆ ಉಡುಗೊರೆಯಾಗಿ ನೀಡಿದ್ದೆ’ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ರೆಂಗಾಖರ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮರಿ ಗ್ರಾಮದ ನಿವಾಸಿಯಾಗಿರುವ ಮೆರಾವಿ ಸಮೀಪದ ಅಂಜನಾ ಗ್ರಾಮದ 29 ವರ್ಷದ ಮಹಿಳೆಯನ್ನು ಏಪ್ರಿಲ್ 1 ರಂದು ವಿವಾಹವಾಗಿದ್ದರು. ಸೋಮವಾರ ಅವರು ಮತ್ತು ಕುಟುಂಬದ ಇತರ ಸದಸ್ಯರು ತಮ್ಮ ಮನೆಯ ಕೋಣೆಯೊಳಗೆ ಮದುವೆಯ ಉಡುಗೊರೆಗಳನ್ನು ಬಿಚ್ಚುತ್ತಿದ್ದರು .
ಮ್ಯೂಸಿಕ್ ಸಿಸ್ಟಮ್ ವೈರನ್ನು ಎಲೆಕ್ಟ್ರಿಕ್ ಬೋರ್ಡ್‌ಗೆ ಜೋಡಿಸಿ ಮೆರಾವಿ ಸ್ವಿಚ್ ಅನ್ನು ಆನ್ ಮಾಡಿದಾಗ, ಭಾರಿ ಸ್ಫೋಟ ಸಂಭವಿಸಿತ್ತು. ಮೇರಾವಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಅವರ ಸಹೋದರ ರಾಜ್‌ಕುಮಾರ್ (30) ಮತ್ತು ಒಂದೂವರೆ ವರ್ಷದ ಬಾಲಕ ಸೇರಿದಂತೆ ಇತರ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಕೌರಾದದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ವೇಳೆ ಮೇರಾವಿ ಅವರ ಸಹೋದರ ಸಾವನ್ನಪ್ಪಿದ್ದರು.