
ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಪಶ್ಚಿಮ ಬಂಗಾಳದ ಐವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ಇತರ ಐದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲಿಂಬ್ಡಿ ತಾಲೂಕಿನ ನವಿ ಮೊರ್ವಾಡ್ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೆ 4:30 ರ ಸುಮಾರಿಗೆ ಈ ಘಟನೆ ನಡೆದಿದೆ. ಚುಡಾ ಪೊಲೀಸ್ ಠಾಣೆಯ ಸಬ್-ಇನ್ಸ್ ಪೆಕ್ಟರ್ ಜೆ.ಎನ್. ಗಮಾರ ಅವರ ಪ್ರಕಾರ, ಪ್ರವಾಸಿಗರ ಗುಂಪು ಟೆಂಪೋ ಟ್ರಾವೆಲರ್‌ನಲ್ಲಿ ಪ್ರಯಾಣಿಸುತ್ತಿದ್ದು, ಅವರ ವಾಹನವು ಡಂಪರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.
ಮೃತರು ಡಿಯು ಮತ್ತು ಗಿರ್ ಇತರ ಪ್ರವಾಸಿ ಸ್ಥಳಗಳಿಗೆ ತೆರಳಿ ಹಿಂತಿರುಗುತ್ತಿದ್ದರು. ಅವರು ಎರಡು ದಿನಗಳ ನಂತರ ಅಹಮದಾಬಾದ್ ನಿಂದ ವಿಮಾನದಲ್ಲಿ ಪ್ರಯಾಣಿಸಲು ಮುಂದಾಗಿದ್ದರು.
ಅಪಘಾತದ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಂಪಿನ ಇತರ ಐದು ಸದಸ್ಯರನ್ನು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಸಾಯ್ಲಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಅಪಘಾತದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.