ಬೆಂಗಳೂರು: ನಮ್ಮ ಮೆಟ್ರೋದ 5 ನಿಲ್ದಾಣಗಳಿಗೆ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್(IGBC) ಹಸಿರು ಕಟ್ಟಡಕ್ಕೆ ನೀಡುವ ಪ್ರತಿಷ್ಠಿತ ಪ್ಲಾಟಿನಂ ರೇಟಿಂಗ್ ಪ್ರಶಸ್ತಿ ದೊರೆತಿದೆ.
ಕೋಣನಕುಂಟೆ ಕ್ರಾಸ್, ದೊಡ್ಡ ಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳಿಗೆ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಪ್ಲಾಟಿನಂ ರೇಟಿಂಗ್ ಪ್ರಶಸ್ತಿ ನೀಡಲಾಗಿದೆ.
ಎತ್ತರಿಸಿದ ನಿಲ್ದಾಣಗಳ ವಿಭಾಗದಲ್ಲಿ ಈ ಐದು ನಿಲ್ದಾಣಗಳಿಗೆ IGBC ಪ್ಲಾಟಿನಂ ಪ್ರಶಸ್ತಿ ನೀಡಲಾಗಿದೆ. ಐಜಿಬಿಸಿ ಸಂಸ್ಥೆ ಹಸಿರು ಕಟ್ಟಡಗಳಿಗೆ ನೀಡುವ ಪ್ರಮುಖ ಪ್ರಮಾಣೀಕರಣ ಸಂಸ್ಥೆಯಾಗಿದೆ. ಈ ಸಂಸ್ಥೆಯಿಂದ ಪಡೆಯುವ ಪ್ರಮಾಣಿಕರಣ ಪ್ರತಿಷ್ಠಿತ ಮನ್ನಣೆಯಾಗಿದ್ದು, ಇದನ್ನು ವಿವಿಧ ನಿಯತಾಂಕಗಳಲ್ಲಿ ಸುಸ್ಥಿರ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅನುಸರಿಸುವ ಕಟ್ಟಡಗಳು ಮತ್ತು ಮೂಲಸೌಕರ್ಯ ಯೋಜನೆಗಳಾದ ಇಂಧನ ದಕ್ಷತೆ, ನೀರಿನ ಸಂರಕ್ಷಣೆ, ಸುಸ್ಥಿರ ನಿರ್ಮಾಣ ಸಾಮಗ್ರಿಗಳು ನವೀಕರಿಸಬಹುದಾದ ಶಕ್ತಿಯ ಬಳಕೆ ಮತ್ತು ವರ್ಧಿತ ಒಳಾಂಗಣ ಪರಿಸರ ಗುಣಮಟ್ಟಗಳನ್ನು ಪ್ರಮಾಣಿಕರಿಸುತ್ತದೆ ಎನ್ನಲಾಗಿದೆ.