ಗದಗ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿಯಂತ್ರಿಸಲು ಹೊಸ ಕಾನೂನು ಸಿದ್ಧವಾಗುತ್ತಿದೆ. ಜನವರಿ 30ರಂದು ಕರಡು ಪ್ರತಿಯನ್ನು ಸಂಪುಟ ಸಭೆಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಿಸಲು ಕಾನೂನು ಕರಡು ಪ್ರತಿಯನ್ನು ಅನುಭವಿ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ. ಕಾನೂನು ಜಾರಿಯಾದ ಮೇಲೆ ಇದರಲ್ಲಿ ಶಕ್ತಿ ಇಲ್ಲ ಎನ್ನುವಂತಾಗಬಾರದು. ಇದಕ್ಕಾಗಿ ಕಂದಾಯ ಅಧಿಕಾರಿ, ಪೊಲೀಸ್ ಅಧಿಕಾರಿಗಳಿಗೆ ಕರಡು ಪ್ರತಿ ನೀಡಲಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ಕಾನೂನು ಸ್ವರೂಪ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಜನವರಿ 30ರಂದು ನಡೆಯಲಿರುವ ಸಂಪುಟ ಸಭೆಗೆ ಕರಡು ಪ್ರತಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಅಷ್ಟರೊಳಗೆ ಗೃಹ ಸಚಿವರು, ಕಂದಾಯ ಸಚಿವರು, ಉಪಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚನೆ ನಡೆಸಿ ನಂತರ ಮುಖ್ಯಮಂತ್ರಿಗಳಿಗೆ ಪ್ರತಿ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.