ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(KPSC) ಕಚೇರಿಯಲ್ಲಿ ನಾಪತ್ತೆಯಾಗಿದ್ದ ಕೊಳಗೇರಿ ಮಂಡಳಿ ಜೂನಿಯರ್ ಇಂಜಿನಿಯರ್ ನೇಮಕಾತಿ ಪತ್ರ ಕಚೇರಿಯಲ್ಲಿಯೇ ಪತ್ತೆಯಾಗಿದೆ.
ಎರಡು ತಿಂಗಳಿನಿಂದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಿರಿಯ ಎಂಜಿನಿಯರ್ ನೇಮಕಾತಿ ಆಯ್ಕೆ ಪಟ್ಟಿಯ ಫೈಲ್ ನಾಪತ್ತೆಯಾಗಿತ್ತು. 2016ರಲ್ಲಿ ನೇಮಕಾತಿ ಪರೀಕ್ಷೆ ನಡೆದು 2018ರಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಇದನ್ನು ಪ್ರಶ್ನಿಸಿ ವಿವೇಕಾನಂದ ಎಂಬುವರು ಹೈಕೋರ್ಟ್ ಮೊರೆ ಹೋಗಿದ್ದರು. ನಂತರ ಹೈಕೋರ್ಟ್ ಆದೇಶದಂತೆ ಕೆಪಿಎಸ್ಸಿ ಗೌಪ್ಯ ಶಾಖೆ 3ರಲ್ಲಿ ಆಯ್ಕೆ ಪಟ್ಟಿ ತಯಾರಿಸಿ ಜನವರಿ 22ರಂದು ಕಾರ್ಯದರ್ಶಿಯವರ ಆಪ್ತ ಶಾಖೆಯಲ್ಲಿ ಕಡತ ಸ್ವೀಕರಿಸಲಾಗಿತ್ತು.
ಇದಾದ ನಂತರದಲ್ಲಿ ಕಡತ ನಾಪತ್ತೆಯಾಗಿದ್ದು, ಹುಡುಕಾಟದ ನಂತರ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಈಗ ಕಡತ ಪತ್ತೆಯಾಗಿರುವುದಾಗಿ ಅಧಿಕಾರಿಗಳು ವಿಧಾನಸೌಧ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಅಧಿಕೃತವಾಗಿ ಪತ್ರದ ಮೂಲಕ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದು, ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.