
ಥಾಣೆ: 20 ವರ್ಷದ ಮಹಿಳೆ ಮೇಲೆ ಆಕೆಯ 52 ವರ್ಷದ ಮಾವ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ ಎಸಗಿದ್ದಾರೆ. ಆಕೆ 15 ದಿನಗಳ ನಂತರ ತಪ್ಪಿಸಿಕೊಂಡು ದೂರು ನೀಡಿದ್ದು, ಆರೋಪಿಗಳು ಆಕೆಯನ್ನು ಬೆದರಿಸಿದ್ದಾರೆ.
ಭಿವಂಡಿಯ ನಾರ್ಪೋಲಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯು ಆಕೆಯ ಹೆತ್ತವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ, ಲೈಂಗಿಕ ದೌರ್ಜನ್ಯ ಎಸಗಿ 15 ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದಾನೆ. ಇಬ್ಬರು ನಿದ್ದೆ ಮಾಡುವಾಗ ಆಕೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಬ್ಬರೂ ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ಪೊಲೀಸ್ ತಂಡವು ಅವರಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ನಾರ್ಪೋಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಭರತ್ ಕಾಮತ್ ತಿಳಿಸಿದ್ದಾರೆ.
ಮಹಿಳೆ ಮತ್ತು ಆಕೆಯ 26 ವರ್ಷದ ಪತಿ ಮಾವನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಜನವರಿ 30 ರಂದು, ಆರೋಪಿಯು ಮಹಿಳೆಯನ್ನು ಆಕೆಯ ಪೋಷಕರ ಬಳಿ ಬಿಡುವ ನೆಪದಲ್ಲಿ ಹೊರಗೆ ಕರೆದೊಯ್ದನು. ಆದರೆ, ಅವನು ಆಕೆಯನ್ನು ತನ್ನ ಸ್ವಂತ ಮನೆಗೆ ಕರೆದೊಯ್ದು, ಅಲ್ಲಿ ಆಕೆಯನ್ನು ಒಂದು ಕೋಣೆಯಲ್ಲಿ ಕಟ್ಟಿಹಾಕಿ ತನ್ನ ಸ್ನೇಹಿತನಿಗೆ ಕರೆ ಮಾಡಿದನು. ನಂತರ ಇಬ್ಬರೂ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದರು. ಏತನ್ಮಧ್ಯೆ, ಮಾವ ತನ್ನ ಮಗನಿಗೆ ತನ್ನ ಸೊಸೆಯನ್ನು ಆಕೆಯ ಪೋಷಕರ ಮನೆಯ ಬಳಿ ಬಿಟ್ಟಿರುವುದಾಗಿ ತಿಳಿಸಿದ್ದ.
ಆರೋಪಿಗಳು ಮಲಗಿದ್ದಾಗ ಮಹಿಳೆ ಓಡಿಹೋಗಿ ತನ್ನ ಪೋಷಕರ ಮನೆಗೆ ತಲುಪಿದ ನಂತರ ಸತ್ಯ ಬಯಲಾಯಿತು. ಅಲ್ಲಿಂದ, ಆಕೆ ತನ್ನ ಪೋಷಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.