
ಬೆಂಗಳೂರು: ಸರ್ಕಾರಿ ಜಮೀನಿನಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲಾಡಳಿತದಿಂದ ಯಶವಂತಪುರ ವಿಧಾನಸಭಾ ಕ್ಷೇತ್ರದ ಚಿಕ್ಕನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಶವಂತಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 1,600 ಎಕರೆ ಸರ್ಕಾರಿ ಭೂಮಿಯನ್ನು ಅನೇಕ ವರ್ಷಗಳಿಂದ ಸಾವಿರಾರು ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾಗುವಳಿ ಚೀಟಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಬಗರ್ ಹುಕುಂ ಜಮೀನು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇದೆ. ಹೀಗಾಗಿ ಕೆಲವು ಪ್ರಭಾವಿಗಳು, ರಾಜಕಾರಣಿಗಳು ಅಕ್ರಮವಾಗಿ ಬಗರ್ ಹುಕುಂ ಹೆಸರಲ್ಲಿ ಸರ್ಕಾರಿ ಭೂಮಿ ಕಬಳಿಸುತ್ತಿರುವುದರಿಂದ ರೈತರಿಗೆ ಸಾಗುವಳಿ ಚೀಟಿ ನೀಡುವಲ್ಲಿ ತೊಡಕಾಗಿದೆ ಎಂದು ಹೇಳಿದ್ದಾರೆ.
ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡುವ ಸಂಬಂಧ ಕಾಯ್ದೆಗೆ ಕೆಲವು ತಿದ್ದುಪಡಿ ಮಾಡಲು ಕಂದಾಯ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ನಂತರ ಕ್ರಮ ಕೈಗೊಳ್ಳಲಿದ್ದಾರೆ. ಸರ್ಕಾರ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಬಗರ್ ಹುಕುಂ ಭೂಮಿಗೆ ಸಾಗುವಳಿ ಚೀಟಿ ನೀಡುವ ಮತ್ತು ಸಕ್ರಮಗೊಳಿಸುವ ವಿಶ್ವಾಸವಿದ್ದು, ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.