ಬೆಂಗಳೂರು: ಸರ್ಕಾರದ ಅಧಿಕಾರಿಗಳ ಹೆಸರಲ್ಲಿ ನಕಲಿ ಆದೇಶ ಪತ್ರ ಹೊರಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆಯಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲಾಗಿದೆ.
ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳ ಹೆಸರಲ್ಲಿ ನಕಲಿ ಆದೇಶ ಪತ್ರ ಹರಿದಾಡುತ್ತಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಎನ್ ಹೆಚ್ ಎಂ ನೌಕರರನ್ನು ಖಾಯಂಗೊಳಿಸಲಾಗಿದೆ ಎಂಬ ಆದೇಶದ ನಕಲಿ ಪ್ರತಿಗಳು ಹರಿದಾಡುತ್ತಿವೆ. ಆರೋಪಿಗಳು ಆದೇಶದ ಪ್ರತಿಗಳನ್ನು ಆರ್ಥಿಕ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನಿಸಿದ್ದು ಈ ಆದೇಶ ಕುರಿತು ನೈಜತೆ ಪರಿಶೀಲನೆ ವೇಳೆ ನಕಲಿ ಆದೇಶ ಪತ್ರ ಎಂಬುದು ಬೆಳಕಿಗೆ ಬಂದಿದೆ.
ಈ ಕುರಿತು ಮುಖ್ಯಮಂತ್ರಿ ಮುಖ್ಯ ಕಾರ್ಯದರ್ಶಿ ಸಿದ್ದೇಶ ಪೊತಲಕಟ್ಟಿ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದೆಡೆ ವಕ್ಫ್ ಬೋರ್ಡ್ ಕಾರ್ಯದರ್ಶಿ ಹೆಸರಲ್ಲಿ ಕಾಂಟ್ರಾಕ್ಟ್ ಪಡೆದ ಆದೇಶ ಪ್ರತಿ ಹೊರಡಿಸಿ ಹಣ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಕಾಲೋನಿ ಮೂಲ ಸೌಕರ್ಯಗಳ ಅಭಿವೃದ್ಧಿ ಹೆಸರಲ್ಲಿ ನಕಲಿ ಆದೇಶಪ್ರತಿ ಹೊರಡಿಸಲಾಗಿದೆ. ನಕಲಿ ಆದೇಶ ಪ್ರತಿಯಲ್ಲಿ ನಾಲ್ಕು ಕೋಟಿ ಕಾಂಟ್ರಾಕ್ಟ್ ನೀಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಸರ್ಕಾರಿ ವಕ್ಫ್ ಬೋರ್ಡ್ ಕಾರ್ಯದರ್ಶಿ ನಾಗರಾಜ್ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದು, ಎರಡೂ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.