ಬೆಂಗಳೂರು: ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವಿವಿಧ ಕೋರ್ಸುಗಳ ನಕಲಿ ಅಂಕಪಟ್ಟಿ ನೀಡುತ್ತಿದ್ದ ಸಂಸ್ಥೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಎಜುಕೇಶನ್ ಕನ್ಸಲ್ಟೆನ್ಸಿ ಹೆಸರಿನಲ್ಲಿ ರಾಜಾಜಿನಗರದ ಕ್ವೆಸ್ಟ್ ಟೆಕ್ನಾಲಜೀಸ್ ನಕಲಿ ಅಂಕಪಟ್ಟಿ ನೀಡುತ್ತಿತ್ತು. ಜೆಪಿ ನಗರದ ಸಿಸ್ಟಮ್ ಕ್ವೆಸ್ಟ್, ಭದ್ರಪ್ಪ ಲೇಔಟ್ ನ ಆರೋಹಿ ಇನ್ಸ್ಟಿಟ್ಯೂಟ್, ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜು, ವಿಜಯನಗರದ ಬೆನಕ ಕರಸ್ಪಾಂಡೆನ್ಸ್ ಕಾಲೇಜುಗಳ ಮೇಲೆ ದಾಳಿ ನಡೆಸಲಾಗಿದ್ದು, ವಿಕಾಸ ಭಾಗವತ್ ಎಂಬುವನನ್ನು ಬಂಧಿಸಲಾಗಿದೆ.
ದಾಳಿಯ ಸಂದರ್ಭದಲ್ಲಿ 6,800ಕ್ಕೂ ಅಧಿಕ ನಕಲಿ ಅಂಕಪಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಅಣ್ಣಾಮಲೈ ವಿವಿ, ಮಂಗಳೂರು ವಿವಿ, ಬೆಂಗಳೂರು ವಿವಿ, ಕುವೆಂಪು ವಿವಿ, ಗೀತಂ ಯೂನಿವರ್ಸಿಟಿ, ಸಿಕ್ಕಿಂ ಯೂನಿವರ್ಸಿಟಿ ಸೇರಿದಂತೆ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ.
ಅವುಗಳನ್ನು ಸಂಬಂಧಿತ ವಿವಿಗಳಿಗೆ ಕಳುಹಿಸಿ ನಕಲಿ ಎಂಬ ಮಾಹಿತಿಯನ್ನು ಸಿಸಿಬಿ ಪೊಲೀಸರು ಪಡೆದುಕೊಂಡಿದ್ದು, ಮಾಲೀಕರಿಗೆ ನೋಟಿಸ್ ನೀಡಿದ್ದಾರೆ. ಇಂತಹ ಅಂಕಪಟ್ಟಿಗಳನ್ನು ನೀಡಿ ಕೆಲವರು ಉದ್ಯೋಗ, ಬಡ್ತಿ ಪಡೆದುಕೊಂಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಹೇಳಲಾಗಿದೆ.