ಕೇರಳದ ಪತ್ತನಂತಿಟ್ಟದ ಕೈಪಟ್ಟೂರಿನಲ್ಲಿ ಆಘಾತಕಾರಿ ಸಂಗತಿಯೊಂದು ಬಹಿರಂಗವಾಗಿದೆ. ಎಎಂಆರ್ ಆಸ್ಪತ್ರೆಯಲ್ಲಿ ನಕಲಿ ವೈದ್ಯರೊಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಅಡೂರ್ ರಸ್ತೆಯಲ್ಲಿರುವ ಆಸ್ಪತ್ರೆ ಡಾ. ಚಂದ್ರಶೇಖರನ್ ಅವರಿಗೆ ಸೇರಿದ್ದು, ಆದರೆ ಅವರು ಬಹುತೇಕ ಕಾಲ ಇರುತ್ತಿರಲಿಲ್ಲ ಎಂದು ವರದಿಯಾಗಿದೆ. ಅವರ ಅನುಪಸ್ಥಿತಿಯಲ್ಲಿ ಸಹಾಯಕಿ ನಬೀಸಾ ಚಿಕಿತ್ಸೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಈಗ ಪತ್ತೆಯಾಗಿದೆ.
ಇತ್ತೀಚೆಗೆ, ರೋಗಿಯೊಬ್ಬರು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದು, ಆಗ ನಬೀಸಾ ಅಸ್ವಸ್ಥತೆಯನ್ನು ನಿವಾರಿಸಲು ಚುಚ್ಚುಮದ್ದು ಪಡೆಯಲು ಸೂಚಿಸಿದ್ದಾರೆ. ಆದರೆ ರೋಗಿಗೆ ಸಂಶಯ ಬಂದು ಚುಚ್ಚುಮದ್ದನ್ನು ನಿರಾಕರಿಸಿ ಬದಲಿಗೆ ಔಷಧಿ ನೀಡುವಂತೆ ಕೇಳಿದ್ದಾರೆ.
ನಬೀಸಾ ಅವರು ಲೇಬಲ್ ಮಾಡದ ಬಿಳಿ ಮಾತ್ರೆಗಳು ಸೇರಿದಂತೆ ಮೂರು ರೀತಿಯ ಔಷಧಿಗಳನ್ನು ಒದಗಿಸಿದ್ದು, “ಇದು ಕ್ಯಾಲ್ಸಿಯಂ ಮಾತ್ರೆ, ಇದು ನಿಮ್ಮ ಎಲ್ಲಾ ನೋವನ್ನು ನಿವಾರಿಸುತ್ತದೆ. ನಿಮಗೆ ಡಿಸ್ಕ್ ಸಮಸ್ಯೆ ಮತ್ತು ಮೊಣಕಾಲು ಸವೆತ ಇದೆ” ಎಂದಿದ್ದಾರೆ.
ಚಿಕಿತ್ಸೆ ನೀಡುವುದರ ಜೊತೆಗೆ, ನಬೀಸಾ ರೂ. 250 ಸಮಾಲೋಚನಾ ಶುಲ್ಕವನ್ನು ವಿಧಿಸಿದ್ದು, ಇನ್ನೊಬ್ಬ ವೈದ್ಯರ ಲಭ್ಯತೆಯ ಬಗ್ಗೆ ಪ್ರಶ್ನಿಸಿದಾಗ, ತಾವು ಒಬ್ಬರೇ ಇರುವುದಾಗಿ ಹೇಳಿದ್ದಾರೆ.
ನಬೀಸಾ ನೀಡಿದ ಔಷಧಿಗಳನ್ನು ನಂತರ ಜನರಲ್ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದು, ಅಲ್ಲಿನ ವೈದ್ಯ ಶರತ್ ಥಾಮಸ್ ರಾಯ್ ಒಂದು ಮಾತ್ರೆ ನೋವು ನಿವಾರಕ ಮತ್ತು ಇನ್ನೊಂದು ಗ್ಯಾಸ್ ರಿಲೀಫ್ ಮಾತ್ರೆ ಎಂದು ಹೇಳಿದ್ದಾರೆ. ಪ್ಯಾಕೇಜಿಂಗ್ ಕೊರತೆಯಿಂದಾಗಿ ಮೂರನೇ ಮಾತ್ರೆ ಗುರುತಿಸಲು ಸಾಧ್ಯವಾಗಲಿಲ್ಲ.
ಮಾನ್ಯ ಪರವಾನಗಿ ಇಲ್ಲದೇ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿರುವುದನ್ನು ಪಂಚಾಯಿತಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಇದೇ ರೀತಿಯ ಆರೋಪಗಳಿಂದ ಆಸ್ಪತ್ರೆ ಈ ಹಿಂದೆ ಮುಚ್ಚಲ್ಪಟ್ಟಿದ್ದು, ಆದರೆ ನಂತರ ಮತ್ತೆ ತೆರೆಯಲಾಗಿದೆ. ಇದೇ ಪರಿಸ್ಥಿತಿ ದೇಶದ ಬಹುತೇಕ ಕಡೆ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರೆ ಮಾತ್ರ ಸಮಸ್ಯೆ ಬಗೆಹರಿಸಬಹುದಾಗಿದೆ.