ಏಪ್ರಿಲ್ 25ರಂದು ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಕಾಸರಗೋಡು-ತಿರುವನಂತಪುರಂ ನಡುವೆ ಸಂಚರಿಸಲಿರುವ ಈ ರೈಲಿನ ಚಾಲಕನ ಕ್ಯಾಬಿನ್‌ನಲ್ಲಿ ನೀರು ಸೋರುತ್ತಿತ್ತು ಎಂದು ಒಂದಷ್ಟು ಮಾಧ್ಯಮಗಳು ವರದಿ ಮಾಡಿದ್ದವು.
ಇದರ ಬೆನ್ನಲ್ಲೇ ಲೋಕೋ ಪೈಲಟ್ ಒಬ್ಬರು ಕ್ಯಾಬಿನ್‌ನಲ್ಲಿ ಛತ್ರಿ ಹಿಡಿದು ಕುಳಿತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೇರಳದ ಮೊದಲ ವಂದೇ ಭಾರತ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಸಮಸ್ಯೆ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನೀಡಲಾಯಿತು.
ಇಂಡಿಯಾ ಟುಡೆ ಈ ಸಂಬಂಧ ತನಿಖೆ ಮಾಡಿದ್ದು, ಪ್ರಶ್ನೆಯಲ್ಲಿರುವ ಚಿತ್ರವು ಹಲವು ವರ್ಷಗಳ ಹಿಂದಿನದ್ದು ಎಂದು ತಿಳಿದು ಬಂದಿದೆ.
2017ರಲ್ಲಿ ಸೆರೆ ಹಿಡಿಯಲಾದ ವಿಡಿಯೋವೊಂದರಲ್ಲಿ, ಬೇರೊಂದು ರೈಲಿನ ಎಂಜಿನ್‌ನಲ್ಲಿ ಮಳೆ ನೀರು ಸೋರುತ್ತಿದ್ದು, ಲೋಕೋ ಪೈಲಟ್ ಛತ್ರಿ ಹಿಡಿದು ಕುಳಿತಿರುವುದನ್ನು ಅಂದಿನ ರೈಲ್ವೇ ಸಚಿವ ಸುರೇಶ್ ಪ್ರಭು ಗಮನಕ್ಕೆ ತರಲಾಗಿತ್ತು. ಇದೀಗ ಅದೇ ವಿಡಿಯೋದ ಸ್ಕ್ರೀನ್‌ಶಾಟ್ ಒಂದನ್ನು ಕಾಸರಗೋಡು-ತಿರುವನಂತಪುರಂ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ನದ್ದು ಎಂದು ವದಂತಿ ಹಬ್ಬಿಸಲಾಗಿದೆ.