ಅತ್ಯಂತ ಪ್ರಭಾವಶಾಲೀ ಜಾಗತಿಕ ನಾಯಕರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ಇದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಕೋವಿಡ್-19 ಲಸಿಕೆಗಳ ಪೂರೈಕೆ ಇರಬಹುದು, ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ದೇಶದ ನಿಲುವನ್ನು ಪ್ರಸ್ತುತಪಡಿಸುವುದೇ ಇರಬಹುದು, ಪ್ರಧಾನಿ ಮೋದಿಯವರ ದನಿಗೆ ಜಾಗತಿಕ ನಾಯಕರು ಗೌರವಿಸುವಂತೆ ಆಗಿದೆ.
ನೊಬೆಲ್ ಪ್ರಶಸ್ತಿ ಸಮಿತಿಯ ಉಪ ನಾಯಕ ಆಸ್ಲೇ ಟೋಜೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮುಂಚೂಣಿಯಲ್ಲಿರುವ ಸಂಭವನೀಯರಾಗಿದ್ದಾರೆ ಎಂದು ಹೇಳಿರುವುದಾಗಿ ಅನೇಕ ವರದಿಗಳು ಇತ್ತೀಚೆಗೆ ಸುದ್ದಿಯಲ್ಲಿವೆ. ಇದೇ ವೇಳೆ, ಭಾರತಕ್ಕೆ ಭೇಟಿ ನೀಡಿರುವ ಟೋಜೆ, ಪ್ರಧಾನಿ ಮೋದಿ ಸರ್ಕಾರ ತೆಗೆದುಕೊಂಡಿರುವ ಅನೇಕ ಕ್ರಮಗಳನ್ನು ಶ್ಲಾಘಿಸುತ್ತಿರುವುದನ್ನು ಸಹ ನೋಡಬಹುದಾಗಿದೆ.
“ಅಣ್ವಸ್ತ್ರಗಳನ್ನು ಬಳಸುವುದರಿಂದ ಆಗುವ ಪರಿಣಾಮಗಳ ಕುರಿತಂತೆ ಗಂಭೀರವಾದ ಭಾಷೆಯಲ್ಲಿ ರಷ್ಯಾಗೆ ಭಾರತ ಮನವರಿಕೆ ಮಾಡಿದ್ದು ಬಹಳ ಉಪಯುಕ್ತವಾದ ಕಾರ್ಯವಾಗಿದೆ. ಯಾರನ್ನೂ ಬೆದರಿಸದೇ, ಏರು ದನಿಯನ್ನೂ ತಾರದೇ ಭಾರತ ತನ್ನ ನಿಲುವನ್ನು ಸ್ನೇಹಶೀಲ ದನಿಯಲ್ಲೇ ಪ್ರಕಟಿಸಿತು. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ನಮಗೆ ಇಂಥ ಇನ್ನಷ್ಟು ನಿದರ್ಶನಗಳು ಬೇಕು,” ಎಂದಿದ್ದಾರೆ ಟೋಜೆ.
“ಭಾರತವು ಮನುಕುಲದ ದೊಡ್ಡ ಭರವಸೆಯಾಗಿದೆ. ತಾತ್ವಿಕ ಆಳಾಂತರಗಳ ಪ್ರಾಚೀನ ಇತಿಹಾಸ ಹೊಂದಿರುವ ಭಾರತ ಶಾಂತಿಯುತ ಧರ್ಮಗಳ ಮನೆಯೂ ಆಗಿದೆ. ಈ ಅಂಶಗಳೆಲ್ಲಾ ಭಾರತ ಸರ್ಕಾರದೊಳಗೆ ಇಳಿದಿರುವುದನ್ನು ನೋಡಿ ನನಗೆ ಸಂತಸವಾಗಿದೆ. ತನ್ನ ಜಾಗತಿಕ ಹೊಣೆಗಾರಿಕೆಯನ್ನು ನಿಭಾಯಿಸಲು ಸಂತಸದಿಂದ ಮುಂದೆ ಬಂದಿರುವ ಭಾರತದ ಬಗ್ಗೆ ನನಗೆ ಬಹಳ ಸಂತೋಷವಿದ್ದು, ಶಾಂತಿ, ಸಮಾನತೆ ಹಾಗೂ ನ್ಯಾಯಪರತೆಯ ಪರವಾದ ದೊಡ್ಡ ಶಕ್ತಿಯಾಗಿ ಭಾರತ ಮೂಡಲಿ. ಹಿಂದಿಗಿಂತಲೂ ಇಂದು ಭಾರತವನ್ನು ಜಾಗತಿಕ ಸಮುದಾಯ ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿದೆ. ಪ್ರಧಾನಿ ಮೋದಿ ತಮ್ಮ ಶಕ್ತಿಯನ್ನು ಬಳಸಿಕೊಂಡು ಮನುಕುಲದ ಒಳಿತಿಗಾಗಿ ಕೆಲಸ ಮಾಡುತ್ತಿರುವುದನ್ನು ಕಂಡು ನನಗೆ ಬಹಳ ಸಂತಸವಾಗಿದೆ. ಚೀನಾ ಹಾಗೂ ಭಾರತಗಳು ಮುಂದಿನ ಸೂಪರ್ ಪವರ್ ದೇಶಗಳಾಗಲಿವೆ,” ಎಂದು ಭಾರತದ ಆಧ್ಯಾತ್ಮ ಶಕ್ತಿಯನ್ನು ಸಹ ಹೊಗಳಿ ಮಾತನಾಡಿದ್ದಾರೆ ಟೋಜೆ.
ಆದರೆ ಪ್ರಧಾನಿ ಮೋದಿ ನೊಬೆಲ್ ಶಾಂತಿ ಪುರಸ್ಕಾರದ ಸಂಭಾವ್ಯರಲ್ಲಿದ್ದಾರೆಯೇ ಎಂದು ಕೇಳಿದಾಗ ನಾಜೂಕಾದ ಉತ್ತರವಿತ್ತ ಟೋಜೆ, “ಯಾವುದೇ ನಾಯಕನಾದರೂ, ಈ ಪುರಸ್ಕಾರ ಪಡೆಯಲು ಜಾಗತಿಕ ಶಾಂತಿಗಾಗಿ ಇನ್ನಷ್ಟು ಹೆಚ್ಚಿನ ಕೆಲಸ ಮಾಡಬೇಕು. ಆದರೆ ಇಲ್ಲಿ ಮೊದಲು ಕೆಲಸವಿರಬೇಕು, ನಂತರ ಜಗತ್ತು,” ಎಂದಿದ್ದಾರೆ.
ಈ ಕುರಿತು ಇನ್ನೂ ಚೆನ್ನಾಗಿ ಸ್ಪಷ್ಟನೆ ನೀಡಿದ ಟೋಜೆ, “ನಾನು ನೋಬೆಲ್ ಸಮಿತಿಯ ಉಪ ನಾಯಕನಾಗಿದ್ದೇನೆ. ಈ ಕುರಿತು ಸುಳ್ಳು ಸುದ್ದಿಯ ಟ್ವೀಟ್‌ಗಳನ್ನು ಹಬ್ಬಿಸಲಾಗಿದೆ. ಇದನ್ನು ನಾವು ಸುಳ್ಳು ಸುದ್ದಿಯೆಂದು ಪರಿಗಣಿಸಬೇಕು. ಇದು ಸುಳ್ಳು. ನಾವು ಈ ಬಗ್ಗೆ ಚರ್ಚಿಸುವುದು ಬೇಡ. ಇದಕ್ಕೆ ರೆಕ್ಕೆ ಪುಕ್ಕಗಳನ್ನು ಕಟ್ಟುವುದು ಬೇಡ. ಆ ಅರ್ಥದಲ್ಲಿ ಬರುವ ಯಾವುದೇ ಹೇಳಿಕೆಯನ್ನು ನಾನು ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡುತ್ತೇನೆ,” ಎಂದಿದ್ದಾರೆ.
ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರಗಳ ಘೋಷಣೆಗಳು ಅಕ್ಟೋಬರ್ 2-9ರ ನಡುವೆ ಆಗಲಿವೆ. ಎಲ್ಲಾ ಘೋಷಣೆಗಳನ್ನು nobelprize.orgನಲ್ಲಿ ನೇರ ಪ್ರಸಾರದಲ್ಲಿ ನೋಡಬಹುದಾಗಿದೆ. ಅಕ್ಟೋಬರ್ 6ರಂದು ನೊಬೆಲ್ ಶಾಂತಿ ಪುರಸ್ಕಾರಗಳನ್ನು ಘೋಷಿಸಲಾಗುವುದು.