ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪ್ರಚೋದನಾತ್ಮಕ ಪೋಸ್ಟ್ ಹಾಕಿದ್ದ ಅಡ್ಮಿನ್ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೋಮು ಸಾಮರಸ್ಯ ಹಾಳು ಮಾಡುವ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಫೇಸ್ಬುಕ್ ಪೇಜ್ ಅಡ್ಮಿನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಹೆಸರಿನಲ್ಲಿ ಪೋಸ್ಟ್ ಹಾಕಿದ್ದು, ಕ್ಷೇತ್ರದ ಸಂಚಾರ ವಿಚಕ್ಷಣದಳದ ಮುಖ್ಯಸ್ಥ ದಯಾನಂದ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಲಾಗಿದೆ.
‘ಪ್ರೀತಿಯ ಕರ್ನಾಟಕ, ಹಿಂದೂಗಳು ಪಶ್ಚಿಮ ಬಂಗಾಳದಲ್ಲಿ ಹಿಂದೂ ಹಬ್ಬ ಆಚರಣೆಯ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ದೇಶಭಕ್ತ ಸಿಖ್ ಸಮುದಾಯ ಖಲಿಸ್ಥಾನಕ್ಕೆ ಹೋರಾಡುತ್ತಿದ್ದಾರೆ. ಕೇರಳದಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ನಿಮಗೆ ಅರಿವಿದೆ. ಕರ್ನಾಟಕವನ್ನು ಪಶ್ಚಿಮ ಬಂಗಾಳ, ಕೇರಳ ಮತ್ತು ಪಂಜಾಬ್ ಆಗಲು ಬಿಡಬೇಡಿ. ಜಾತ್ಯತೀತ ಓಲೈಕೆ ಅಲ್ಲ. ಹಾಗಾಗಿ ಬಿಜೆಪಿಗೆ ಮತ ನೀಡಿ ಎಂದು ಪಿವೈಜೆಂ ಪದ್ಮನಾಭನಗರ ಕ್ಷೇತ್ರ ಹೆಸರಿನ ಫೇಸ್ಬುಕ್ ಪೇಜ್ ನಲ್ಲಿ ಅಡ್ಮಿನ್ ಪೋಸ್ಟ್ ಹಾಕಿದ್ದಾರೆ. ಇದು ಕೋಮುಗಳ ನಡುವೆ ಸೌಹಾರ್ದತೆಗೆ ಧಕ್ಕೆ ತರುತ್ತದೆ. ಅಡ್ಮಿನ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಚುನಾವಣಾ ಅಧಿಕಾರಿ ದೂರು ನೀಡಿದ್ದಾರೆ.