ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಗುಜರಾತ್ ಎಎಪಿ ಮಾಜಿ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ರಾಜ್ಯ ಸಚಿವ ಮತ್ತು ಬಿಜೆಪಿಯ ರಾಜ್ಯ ಮುಖ್ಯಸ್ಥರ ವಿರುದ್ಧ ಕೆಲವು ಅವಹೇಳನಕಾರಿ ಹೇಳಿಕೆ ನೀಡಿದ ಕಾರಣ ಆಮ್ ಆದ್ಮಿ ಪಕ್ಷದ ಗುಜರಾತ್ ಘಟಕದ ಮಾಜಿ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರನ್ನು ಸೂರತ್ ಪೊಲೀಸರು ಬಂಧಿಸಿ ಕ್ರೈಂ ಬ್ರಾಂಚ್ ಕಚೇರಿಗೆ ಕರೆದೊಯ್ದಿದ್ದಾರೆ. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯದ ಗೃಹ ಸಚಿವ ಹರ್ಷ ಸಾಂಘವಿ ಮತ್ತು ಗುಜರಾತ್ ಬಿಜೆಪಿ ಮುಖ್ಯಸ್ಥ ಸಿ.ಆರ್. ಪಾಟೀಲ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿಗಾಗಿ ಇಟಾಲಿಯಾ ವಿರುದ್ಧ ಸೂರತ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಿಜೆಪಿ ಕಾರ್ಯಕರ್ತ ಪ್ರತಾಪ್ ಚೋಡ್ವಾಡಿಯಾ ಅವರು ದೂರು ದಾಖಲಿಸಿದ್ದರು.
ಕಳೆದ ವರ್ಷ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಇಟಾಲಿಯಾ ಅವರನ್ನು ಬಂಧಿಸಿ ಸರಿತಾ ವಿಹಾರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.