ಎಲೆಕ್ಟ್ರಿಕ್ ಕಾರು ದಿಗ್ಗಜ ಟೆಸ್ಲಾ ಅಮೆರಿಕದ ಮಾರುಕಟ್ಟೆಗೆ ಪೂರೈಕೆ ಮಾಡುವ ತನ್ನ ಮಾಡೆಲ್‌ಗಳ ಬೆಲೆಗಳಲ್ಲಿ $1,000-$5,000ನಷ್ಟು ಕಡಿತಗೊಳಿಸಿದೆ. ಹೆಚ್ಚಿನ ಬಡ್ಡಿದರಗಳ ನಡುವೆ ಇನ್ನಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಲ್ಲಿ ಟೆಸ್ಲಾ ಈ ಹೆಜ್ಜೆ ಇಟ್ಟಿದೆ.
ತನ್ನ ಅತ್ಯಂತ ಜನಪ್ರಿಯ ಮಾಡೆಲ್ ವೈ ಸ್ಮಾಲ್ ಎಸ್‌ಯುವಿಯ ಬೆಲೆಯನ್ನು $2,000 ದಷ್ಟು ತಗ್ಗಿಸಿರುವ ಟೆಸ್ಲಾ, $49,990 ಕ್ಕೆ ಇಳಿಸಿದೆ. ಇದೇ ವೇಳೆ ಕಂಪನಿಯ ಮೂರು ಸಣ್ಣ ಸೆಡಾನ್‌ಗಳ ಬೆಲೆಯಲ್ಲಿ $1,000ದಷ್ಟು ಕಡಿತ ಮಾಡಲಾಗಿದೆ. ಟೆಸ್ಲಾದ ಮೊದಲ ತ್ರೈಮಾಸಿಕದ ಮಾರಾಟದಲ್ಲಿ 36%ನಷ್ಟು ಏರಿಕೆ ಕಂಡು ಬಂದಿದೆ.
ಇದೇ ರೀತಿ ತನ್ನ ಎಸ್, ಎಕ್ಸ್ ಹಾಗೂ ವೈ ಶ್ರೇಣಿಯ ಎಲ್ಲ ಕಾರುಗಳ ಬೆಲೆಗಳಲ್ಲಿ ವಿವಿಧ ಹಂತಗಳಲ್ಲಿ ಬೆಲೆಗಳ ಇಳಿಕೆ ಮಾಡಿದೆ ಟೆಸ್ಲಾ.
ಹಣದುಬ್ಬರವನ್ನು ಹಿಡಿತಕ್ಕೆ ತರಲೆಂದು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರಗಳಲ್ಲಿ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ತನ್ನ ಮಾರಾಟಗಳ ಮೇಲೆ ನಕಾರಾತ್ಮ ಪರಿಣಾಮವಾಗುವುದನ್ನು ತಪ್ಪಿಸಲು ಟೆಸ್ಲಾ ಹೀಗೆ ಮಾಡುತ್ತಿದೆ.
ಜನವರಿಯಿಂದ ಮಾರ್ಚ್ ನಡುವಿನ ತ್ರೈಮಾಸಿಕದಲ್ಲಿ ತಾನು ಜಗತ್ತಿನಾದ್ಯಂತ 422,875 ವಾಹನಗಳನ್ನು ಮಾರಾಟ ಮಾಡಿದ್ದಾಗಿ ಟೆಸ್ಲಾ ತಿಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಟೆಸ್ಲಾದ 310,000 ಕಾರುಗಳು ಮಾರಾಟ ಕಂಡಿದ್ದವು.