ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರ ಮನವೊಲಿಸಿದ್ದ ಬಿಜೆಪಿ ವರಿಷ್ಠರು, ಚನ್ನಬಸಪ್ಪ ಅವರನ್ನು ಕಣಕ್ಕಿಳಿಸಿದ್ದರು. ಪಕ್ಷದ ನಾಯಕರ ಮಾತಿಗೆ ಮನ್ನಣೆ ನೀಡಿದ ಈಶ್ವರಪ್ಪನವರು ಪಕ್ಷದ ಅಧಿಕೃತ ಅಭ್ಯರ್ಥಿ ಚನ್ನಬಸಪ್ಪ ಪರ ಪ್ರಚಾರ ಕಾರ್ಯ ನಡೆಸಿ ಅವರ ಗೆಲುವಿಗೆ ಕಾರಣಕರ್ತರಾಗಿದ್ದರು.
ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲು ಈಶ್ವರಪ್ಪನವರಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಲು ಈಶ್ವರಪ್ಪನವರ ಪುತ್ರ ಕಾಂತೇಶ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ, ಈಗಾಗಲೇ ಅಲ್ಲಿ ಕಾಂತೇಶ್ ಪರ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಇದೀಗ ಮಾಜಿ ಸಚಿವ ಬಿ.ಸಿ. ಪಾಟೀಲ್, ಈಶ್ವರಪ್ಪನವರ ನಡೆಗೆ ಕಿಡಿ ಕಾರಿದ್ದಾರೆ.
ಮಂಗಳವಾರದಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ.ಸಿ. ಪಾಟೀಲ್, ಬಿಜೆಪಿ, ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿಯೇ ಇಲ್ಲ. ಆದರೂ ಸಹ ಈಶ್ವರಪ್ಪನವರು ತಮ್ಮ ಮಗ ಕಾಂತೇಶ್ ರನ್ನು ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಿ ಪ್ರಚಾರ ಕಾರ್ಯ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರಲ್ಲದೆ, ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣಕರ್ತರಾದವರನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಮಗನ ಪರ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.