ಬೆಂಗಳೂರು: ಪರಿಸರ ಉಳಿಸುವ ಮಾತನಾಡುವ ಬದಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಯಾಕೆ ಬೇಲೂರು ತಾಲೂಕಿನ ನಂದಗೋಡನ ಹಳ್ಳಿಯಲ್ಲಿ ಅಕ್ರಮವಾಗಿ ಮರಗಳನ್ನು ಕಡಿದವರ ಪರವಾಗಿ ಮಾತನಾಡಿದ್ದಾರೆ? ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ ಮರ ಕಡಿಸಿ ಪ್ರತಾಪಸಿಂಹ ಸೋದರನ ಜಾಗದಲ್ಲಿ ಹಾಕುವಂತೆ ಹೇಳಿದ್ದಾರೆ ಎಂದು ಹೆಚ್.ಡಿ.ಕುಮರಸ್ವಾಮಿ ಆರೋಪಿಸಿರುವುದು ಹಾಸ್ಯಾಸ್ಪದ. ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ ಸಿಂಹ ಪ್ರಕರಣದಲ್ಲಿ ಬಿಜೆಪಿಯವರೇ ಪ್ರತಾಪ ಸಿಂಹ ಪರ ನಿಲ್ಲದಿರುವಾಗ ಎಚ್.ಡಿ.ಕೆ. ಏಕೆ ಅವರ ಪರ ವಕಾಲತ್ತು ವಹಿಸುತ್ತಿದ್ದಾರೆ ಎಂಬುದು ಅಚ್ಚರಿ ತಂದಿದೆ ಎಂದು ತಿರುಗೇಟು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಹಜರು ಮಾಡಿದ್ದ ತಹಶೀಲ್ದಾರ್, 300ಕ್ಕೂ ಹೆಚ್ಚು ಮರಗಳನ್ನು ಅನುಮತಿ ಇಲ್ಲದೆ ಅಕ್ರಮವಾಗಿ ಕಡಿಯಲಾಗಿದೆ. ಸರ್ಕಾರಿ ಜಾಗದಲ್ಲಿದ್ದ ಮರಗಳನ್ನೂ ಕಡಿದಿದ್ದಾರೆ. ಇದರಲ್ಲಿ ಬೀಟೆ, ಸಾಗುವಾನಿ, ಮಹಾಗನಿ ಮೊದಲಾದ ಲಕ್ಷಾಂತರ ರೂಪಾಯಿ ಬೆಲೆಬಾಳುವ 25 ಲೋಡ್ ಮರ ಇದೆ ಎಂದು ಹೇಳಿದ್ದಾರೆ. ಕತ್ತರಿಸಿದ ಮರಗಳ ರಾಶಿ ಇರುವ ವಿಡಿಯೋ ಮತ್ತು ಅವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ನೂರಾರು ಮರಗಳನ್ನು ಕಡಿದಿರುವುದು ಮೇಲ್ನೋಟಕ್ಕೇ ಕಾಣುತ್ತಿದೆ. ವಸ್ತು ಸ್ಥಿತಿ ಹೀಗಿರುವಾಗ ಕುಮಾರಸ್ವಾಮಿ ಅವರ ಪರವಾಗಿ ಮಾತನಾಡುತ್ತಿದ್ದಾರೆ ಎಂದರೆ ಅಚ್ಚರಿ.
ಅಕ್ರಮ ಮರ ಕಡಿದ ಹಿನ್ನೆಲೆಯಲ್ಲಿ ಭೂಮಿಯ ಮಾಲಿಕರ ವಿರುದ್ಧ ಅರಣ್ಯ ಇಲಾಖೆಯ ಅಧಿಕಾರಿಗಳು ಡಿ.16ರಂದು ಎಫ್.ಐ.ಆರ್ ದಾಖಲಿಸಿದ್ದಾರೆ, 2 ದಿನಗಳ ಬಳಿಕ ಈ ಭೂಮಿಯಲ್ಲಿ ಶುಂಠಿ ಬೆಳೆಯಲು ವಿಕ್ರಂ ಸಿಂಹ ಎಂಬುವವರು ಕರಾರು ಮಾಡಿಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಅವರು ಸಂಸದರ ಸೋದರ ಎಂಬುದೂ ಗೊತ್ತಿಲ್ಲ. ಅದು ಮುಖ್ಯವೂ ಅಲ್ಲ. ಭೂ ಮಾಲೀಕರೊಂದಿಗೆ 11.12.2023ರಂದು ಅಗ್ರಿಮೆಂಟ್ ಆಗಿದೆ. ನಂರದಲ್ಲಿ ಆ ಜಮೀನಿನಲ್ಲಿ ಹಾಗೂ ಪಕ್ಕದ ಗೋಮಾಳದಲ್ಲಿ ಅಕ್ರಮವಾಗಿ ಮರ ಕಡಿಯಲಾಗಿದೆ. ಯಾವುದೇ ಬಡ ರೈತನಿಗೆ ನೂರಾರು ಮರ ಕಡಿಯುವ ಶಕ್ತಿ, ಧೈರ್ಯ ಇರುತ್ತದೆಯೇ. ಪ್ರಭಾವಿಗಳು ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸ್ವತಃ ರೈತ ಕುಟುಂಬದಿಂದ ಬಂದ ಕುಮಾರಸ್ವಾಮಿಯವರೇ ಕಾಡಿನಂತೆ ದಟ್ಟವಾದ ಮರಗಳು ಇರುವ ಸ್ಥಳದಲ್ಲಿ, ನೆರಳಿನಿಂದ ಕೂಡಿದ ನೂರಾರು ಮರ ಬೇರು ಬಿಟ್ಟಿರುವ ಜಮೀನಿನಲ್ಲಿ ಶುಂಠಿ ಬೆಳೆಯಲು ಸಾಧ್ಯವೇ? ಈ ಬಗ್ಗೆ ಉತ್ತರ ನೀಡಬೇಕು ಎಂದಿದ್ದಾರೆ. ಹೀಗಿರುವಾಗ ಬೆಲೆ ಬಾಳುವ ಮರಗಳಿರುವ ಜಮೀನಿನಲ್ಲಿ ಶುಂಠಿ ಬೆಳೆಯಲು ವಿಕ್ರಂ ಸಿಂಹ ಅವರು ಕರಾರು ಮಾಡಿಕೊಂಡಿರುವುದರ ಹಿಂದಿನ ಉದ್ದೇಶ ಏನಿತ್ತು ಎಂಬುದು ಶ್ರೀಸಾಮಾನ್ಯನಿಗೂ ತಿಳಿಯುತ್ತದೆ.
ವಿರೋಧಿಗಳ ಧ್ವನಿ ಅಡಗಿಸಲು ಕಾಂಗ್ರೆಸ್ ನವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ನೂರಾರು ಮರಗಳನ್ನು ಕಡಿಯಲಾಗಿದೆ. ದೃಶ್ಯ ನೋಡಿದರೆ ಕಣ್ಣೀರು ಬರತ್ತೆ…. ಒಂದು ಮರ ಬೆಳೆಸಲು ಹಲವು ವರ್ಷ ಬೇಕು. ನಾವು ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು 5 ಕೋಟಿ ಗಿಡ ನೆಡುವ ಕಾರ್ಯಕ್ರಮ ಹಾಕಿಕೊಂಡಿದ್ದರೆ, ಕೆಲವರು ಸ್ವಾರ್ಥಕ್ಕಾಗಿ ಬಡವರಿಗೆ 75 ಸಾವಿರ, 1 ಲಕ್ಷ ರೂ. ಗುತ್ತಿಗೆ ಹಣದ ಆಸೆ ತೋರಿಸಿ ಅಲ್ಲಿರುವ ಲಕ್ಷಾಂತರ ರೂ. ಮೌಲ್ಯದ ಮರ ಕಡಿಯುತ್ತಿದ್ದಾರೆ. ಶುಂಠಿ ಬೆಳೆ ಹೆಸರಲ್ಲಿ ಮರ ಕಡಿಯುವ ಮಾಫಿಯಾ ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಅರಣ್ಯವೇ ಉಳಿಯುವುದಿಲ್ಲ. ಇಂತಹ ಅಕ್ರಮ ಮಾಡುವವರ ಪರ ಯಾರೂ ಬ್ಯಾಟಿಂಗ್ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ.