ಬೆಳಗಾವಿ(ಸುವರ್ಣಸೌಧ): ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಹೆಚ್ಚುವರಿ ಭೂಮಿ ಕಂಡು ಬಂದಲ್ಲಿ ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಹರೀಶ್ ಪೂಂಜಾ ಅವರು ವಿಷಯ ಪ್ರಸ್ತಾಪಿಸಿ, ಅರಣ್ಯ ಗಡಿ ಭಾಗದ ರೈತರ ಜಮೀನುಗಳಿಗೆ ಸಾಗುವಳಿ ಚೀಟಿ ಪಡೆಯಲು ಇಲಾಖೆಯ ನಿರಾಕ್ಷೇಪಣಾ ಪತ್ರ ಅಗತ್ಯವಾಗಿದೆ. ಆದರೂ ಅದನ್ನು ಪಡೆಯುವುದು ಕಷ್ಟವಾಗಿದೆ. ಕ್ಷೇತ್ರದಲ್ಲಿ ಜಂಟಿ ಸಮೀಕ್ಷೆ ನಡೆಸಿದಾಗ 800 ಎಕರೆ ಅರಣ್ಯ ಪ್ರದೇಶ ಇದ್ದು, ಹೆಚ್ಚುವರಿಯಾಗಿ 500 ಎಕರೆ ಪತ್ತೆಯಾಗಿದೆ. ಹೀಗಾಗಿ ನಕ್ಷೆ ಇಲ್ಲದ ಜಮೀನುಗಳನ್ನು ಜಂಟಿ ಸರ್ವೆ ಮಾಡಿಸಿ ರೈತರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವ ಈಶ್ವರ್ ಖಂಡ್ರೆ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಹೆಚ್ಚುವರಿ ಭೂಮಿ ಕಂಡು ಬಂದರೆ ಗಡಿ ಗುರುತಿಸಿ ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.