ಬೆಂಗಳೂರು: ಸಿಇಟಿ ಎರಡನೇ ಮುಂದುವರೆದ ಸುತ್ತಿನ ಪ್ರವೇಶ ಪ್ರಕ್ರಿಯೆ ಬಳಿಕ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್ ಗಳ 16 ಸಾವಿರ ಸೀಟುಗಳು ಭರ್ತಿಯಾಗದೆ ಖಾಲಿ ಉಳಿದಿವೆ.
ಸರ್ಕಾರ ಮತ್ತು ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಸಂಘದ ನಡುವಿನ ಒಪ್ಪಂದದ ಪ್ರಕಾರ ಪ್ರವೇಶ ಪ್ರಕ್ರಿಯೆ ಬಳಿಕ ಬಾಕಿ ಉಳಿದ ಸೀಟುಗಳನ್ನು ಕಾಲೇಜುಗಳಿಗೆ ಬಿಟ್ಟು ಕೊಡಬೇಕಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಹೇಳಿದ್ದಾರೆ.
ಸಿಇಟಿ ಎರಡನೇ ಸುತ್ತಿನ ಎರಡನೇ ಮುಂದುವರೆದ ಸುತ್ತಿನ ಪ್ರವೇಶ ಪ್ರಕ್ರಿಯೆ ಬಳಿಕ ಸುಮಾರು 16,004 ಸೀಟುಗಳು ಖಾಲಿ ಉಳಿದಿದೆ. ಇಂಜಿನಿಯರಿಂಗ್ ನ ವಿವಿಧ ವಿಭಾಗಗಳಲ್ಲಿ 13,089, ಆರ್ಕಿಟೆಕ್ಚರ್ ಕೋರ್ಸ್ ನಲ್ಲಿ 569 ಸೀಟುಗಳು ಖಾಲಿ ಉಳಿದಿವೆ. ಸೀಟು ಹಂಚಿಕೆಯಾದ 2208 ವಿದ್ಯಾರ್ಥಿಗಳು ಶುಲ್ಕ ಪಾವತಿಸಿಲ್ಲ. ಶುಲ್ಕ ಪಾವತಿಸಿದ 95 ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶ ಪಡೆದುಕೊಂಡಿಲ್ಲ ಎಂದು ಹೇಳಲಾಗಿದೆ.