ಬೆಂಗಳೂರು: ಹೊರಗುತ್ತಿಗೆ ನೇಮಕಾತಿಯಲ್ಲಿ ನೌಕರರಿಗೆ ಆಗುತ್ತಿರುವ ಶೋಷಣೆ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಿಲ್ಲಾ ಮಟ್ಟದಲ್ಲಿ ವಿವಿಧೋದ್ದೇಶ ಸಹಕಾರ ಸಂಘಗಳನ್ನು ಸ್ಥಾಪಿಸಲು ಮುಂದಾಗಿದೆ.
ನೇಮಕಾತಿ ಏಜೆನ್ಸಿಗಳಿಗೆ ಗೇಟ್ ಪಾಸ್ ನೀಡಿ ಸಹಕಾರ ಸಂಘಗಳ ಮೂಲಕ ನೇಮಕಾತಿ ನಡೆಸಲಾಗುವುದು. ಹೊರಗುತ್ತಿಗೆ ನೌಕರರಿಗೆ ನೇಮಕಾತಿ ಏಜೆನ್ಸಿಗಳಿಂದ ಆಗುತ್ತಿರುವ ಶೋಷಣೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಏಜೆನ್ಸಿಗಳಿಂದ ಹೊರಗುತ್ತಿಗೆ ನೌಕರರಿಗೆ ಅನ್ಯಾಯ, ಶೋಷಣೆ ಆಗುತ್ತಿದ್ದು, ಇದನ್ನು ತಪ್ಪಿಸಲು ಕಾರ್ಮಿಕ ಇಲಾಖೆ ಕ್ರಮ ಕೈಗೊಂಡಿದೆ. ಖಾಸಗಿ ಏಜೆನ್ಸಿಗಳ ಮೂಲಕ ನೇಮಕಾತಿಗೆ ತಡೆ ಹಾಕಿ ಸಹಕಾರಿ ವಲಯಕ್ಕೆ ಜವಾಬ್ದಾರಿ ನೀಡಲಾಗುವುದು.
ಬೀದರ್ ಮಾದರಿಯಲ್ಲಿ ವಿವಿಧೋದ್ದೇಶ ಸಹಕಾರ ಸಂಘ ಆರಂಭಿಸಲಾಗುವುದು. ಸಂಘಕ್ಕೆ ಸೇವಾ ಶುಲ್ಕ ಮಾತ್ರ ಲಭ್ಯವಾಗಲಿದೆ. ನೇಮಕಾತಿಯಲ್ಲಿ ಶೇಕಡ 1ರಷ್ಟು ಸೇವಾ ಶುಲ್ಕ ಸಂಗ್ರಹಿಸಲಿದ್ದು, ಮಧ್ಯವರ್ತಿ ಇಲ್ಲದೆ ಅಗತ್ಯ ಇರುವ ಕಡೆ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಬಹುದು. ವೇತನ ನೇರವಾಗಿ ನೌಕರರ ಖಾತೆಗೆ ವರ್ಗಾವಣೆಯಾಗುತ್ತದೆ. ಸಂಘಕ್ಕೆ ಸ್ವಲ್ಪ ದುಡಿಯುವ ಬಂಡವಾಳ ಸಿಗುತ್ತದೆ. ತುರ್ತು ಸಂದರ್ಭದಲ್ಲಿ ಸಂಘದಿಂದಲೇ ಪಿಎಫ್, ಎಸ್‌ಐ ಪಾವತಿಸಿ ನಂತರ ಇಲಾಖೆಗಳಿಂದ ಹಣ ವಾಪಸ್ ಸ್ವೀಕರಿಸಲಾಗುವುದು.