ಬೆಂಗಳೂರು: ಪದೇ ಪದೇ ಪುರುಷತ್ವ ಪರೀಕ್ಷೆಯಿಂದ ಮುಜುಗರವಾಗುತ್ತಿದೆ ಎಂದು ಕೋರ್ಟ್ ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಳಲು ತೋಡಿಕೊಂಡಿದ್ದಾರೆ.
ತನಿಖೆಗೆ ಸಹಕರಿಸಬೇಕೆಂಬ ಕಾರಣಕ್ಕೆ ಎರಡು ಪ್ರಕರಣಗಳಲ್ಲಿ ಪುರುಷತ್ವ ಪರೀಕ್ಷೆ ಮಾಡಿಸಿಕೊಂಡಿದ್ದೇನೆ. ಮತ್ತೆ ಅದೇ ಪರೀಕ್ಷೆ ಮಾಡಿಸಲು ಕೇಳುತ್ತಿದ್ದಾರೆ. ಪದೇ ಪದೇ ಖಾಸಗಿ ಅಂಗ ತೋರಿಸಲು ಮುಜುಗರವಾಗುತ್ತಿದೆ. ಇದರಿಂದ ಪಾರು ಮಾಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಮಂಗಳವಾರ ಪ್ರಜ್ವಲ್ ರೇವಣ್ಣ ಅವರನ್ನು ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು ಕಸ್ಟಡಿಯಲ್ಲಿ ಏನಾದರೂ ಸಮಸ್ಯೆ ಆಯ್ತಾ ಎಂದು ಪ್ರಶ್ನಿಸಿದಾಗ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ, ಪದೇಪದೇ ಪುರುಷತ್ವ ಪರೀಕ್ಷೆಯಿಂದ ಮುಜುಗರವಾಗುತ್ತಿದೆ ಎಂದಿದ್ದಾರೆ.
ಆಗ ನ್ಯಾಯಾಧೀಶರು ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾತ್ರ ಮಾಡಿಸಿ ಎಂದು ಎಸ್ಐಟಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರು ಪ್ರಜ್ವಲ್ ರೇವಣ್ಣನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದು, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ಗೆ ಕರೆದೊಯ್ಯಲಾಗಿದೆ.