ಜಗತ್ತಿನ ಅತ್ಯಂತ ಸಿರಿವಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಯಾರಿಗೆ ತಾನೇ ಗೊತ್ತಿಲ್ಲ? ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾಗಳ ಮಾಲೀಕರಾದ ಮಸ್ಕ್ ಇತ್ತೀಚೆಗೆ ಮೈಕ್ರೋ ಬ್ಲಾಗಿಂಗ್ ದಿಗ್ಗಜ ಟ್ವಿಟರ್ ಖರೀದಿ ಮಾಡುವ ಮೂಲಕ ಭಾರೀ ಸುದ್ದಿಯಲ್ಲಿದ್ದರು.
ತಮ್ಮ ಸ್ಪೇಸ್‌ಎಕ್ಸ್ ಪ್ರಧಾನ ಕಚೇರಿ ಇರುವ ಟೆಕ್ಸಸ್‌ನ ಬೊಕಾ ಚಿಕಾ ಬಳಿ ಪೂರ್ವಸಜ್ಜಿತ ಅತಿಥಿ ಗೃಹವೊಂದನ್ನು ಮಸ್ಕ್ ಖರೀದಿ ಮಾಡಿದ್ದಾರೆ.
ಶತಕೋಟಿಗಳಲ್ಲಿ ಆಸ್ತಿ ಹೊಂದಿದ್ದರೂ ಸಹ ತಮ್ಮ ದೈಹಿಕ ಸ್ವತ್ತುಗಳನ್ನು ಮಾರಾಟ ಮಾಡುತ್ತಾ ಬಂದಿದ್ದಾರೆ ಮಸ್ಕ್. ಇದರಲ್ಲಿ ಕ್ಯಾಲಿಫೋರ್ನಿಯಾದಲ್ಲಿರುವ ಆರು ಮ್ಯಾನ್ಶನ್‌ಗಳೂ ಸೇರಿವೆ.
ಲಾಸ್ ವೆಗಾಸ್ ಮೂಲದ ಸ್ಟಾರ್ಟ್‌ಅಪ್ ಬಾಕ್ಸಬಲ್ ಸಜ್ಜುಗೊಳಿಸಿದ ’ಕ್ಯಾಸೆಟಾ’ ಎಂಬ ಪುಟ್ಟ ಮನೆಯಲ್ಲಿ ಮಸ್ಕ್ ಸದ್ಯ ವಾಸವಿದ್ದಾರೆ. ಈ ಮನೆಯು $50,000 ಬೆಲೆ ಬಾಳಬಹುದು ಎಂದು ಮಸ್ಕ್ ಟ್ವಿಟ್‌ನಲ್ಲಿ ತಿಳಿಸಿದ್ದಾರೆ. ಸದ್ಯದ ಮಟ್ಟಿಗೆ ಬೇ ಏರಿಯಾ ಎಂಬಲ್ಲಿರುವ ಈವೆಂಟ್ ಹೌಸ್ ಮಾತ್ರವೇ ತಾವು ಹೊಂದಿರುವ ಮನೆಯಾಗಿದೆ ಎಂದು ಮಸ್ಕ್ ತಿಳಿಸಿದ್ದಾರೆ.
ಸುಸಜ್ಜಿತ ಅಡುಗೆ ಮನೆ, ಡಬಲ್ ಸಿಂಕ್, ಓವನ್, ಮೈಕ್ರೋವೇವ್, ಡಿಶ್‌ವಾಶರ್, ಶೇಕರ್ ಕ್ಯಾಬಿನೇಟ್ರಿ, ಡೀಪ್ ಶವರ್/ಟಬ್, ವೆಸೆಲ್ ಸಿಂಕ್, ದೊಡ್ಡ ಕೌಂಟರ್, ಬ್ಯಾಕ್‌ಲಿಟ್ ಕನ್ನಡಿ, ಸ್ಲೈಡಿಂಗ್ ಗಾಜಿನ ಬಾಗಿಲು ಸೇರಿದಂತೆ ನಾವು ಊಹಿಸಬಹುದಾದ ಸುಸಜ್ಜಿತ ವ್ಯವಸ್ಥೆಗಳೆಲ್ಲವನ್ನೂ ಈ ಮನೆ ಹೊಂದಿದೆ.
ಇಂಥ ಪೂರ್ವಸಜ್ಜಿತ ಮನೆಗಳನ್ನು ಎಲ್ಲಿಗೆ ಬೇಕಾದರೂ ಸಾಗಿಸಬಹುದಾದಷ್ಟು ಪೋರ್ಟಬಲ್ ಆಗಿ ರಚಿಸುವ ಉದ್ದೇಶವನ್ನು ಮೇಲ್ಕಂಡ ಸ್ಟಾರ್ಟ್‌ಅಪ್ ಹೊಂದಿದೆ.