ಅಕ್ಕಿರೊಟ್ಟಿ ಕಾಯಿಚಟ್ನಿ ಇದ್ದರೆ ಮತ್ತೆ ಬೇರೆ ಏನೂ ಬೇಡ ಅನ್ನುವಷ್ಟು ರುಚಿಯಾಗಿರುತ್ತೆ ಈ ತಿಂಡಿ. ಅಕ್ಕಿ ರೊಟ್ಟಿ ತಿನ್ನಬೇಕು ಎನ್ನುವ ಆಸೆ ಇದ್ದರು ಅದನ್ನು ಮಾಡುವುದೇ ಒಂದು ದೊಡ್ಡ ಕಷ್ಟ.
ಹದ ತಪ್ಪಿದರೆ ರೊಟ್ಟಿ ರುಚಿಯೇ ಇರುವುದಿಲ್ಲ. ತೆಳುವಾಗಿ ರೊಟ್ಟಿ ತಟ್ಟುವುದೇ ಒಂದು ಸವಾಲಿನ ಕೆಲಸ. ಅದು ಅಲ್ಲದೇ ಇದನ್ನೆಲ್ಲಾ ಮಾಡುವುದಕ್ಕೆ ಸಮಯ ಕೂಡ ಹೆಚ್ಚು ಬೇಕಾಗುತ್ತದೆ ಎಂದು ದೂರುವವರು ಒಮ್ಮೆ ಈ ರೀತಿ ಅಕ್ಕಿ ರೊಟ್ಟಿ ಮಾಡಿನೋಡಿ. ಆಮೇಲೆ ಪದೇ ಪದೇ ಮಾಡಿಕೊಂಡು ತಿನ್ನುತ್ತೀರಿ.
ಬೇಕಾಗುವ ಸಾಮಾಗ್ರಿ: ಮೊದಲಿಗೆ ಒಂದು ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ಸಣ್ಣಗೆ ಹಚ್ಚಿಟ್ಟುಕೊಂಡ ಈರುಳ್ಳಿ, ಕಾಲು ಕಪ್ ತುರಿದಿಟ್ಟುಕೊಂಡ ಕ್ಯಾರೆಟ್ , ಕಾಲು ಕಪ್ ಸೌತೆಕಾಯಿ ತುರಿ, ಹಸಿಮೆಣಸು-2 ಸಣ್ಣಗೆ ಹಚ್ಚಿಟ್ಟುಕೊಳ್ಳಿ. ಉಪ್ಪು ರುಚಿಗೆ ತಕ್ಕಷ್ಟು. ಕೊತ್ತಂಬರಿಸೊಪ್ಪು ಸ್ವಲ್ಪ.
ಮೊದಲಿಗೆ ಈರುಳ್ಳಿ, ಕ್ಯಾರೆಟ್, ಸೌತೆಕಾಯಿ, ಹಸಿಮೆಣಸು, ಕೊತ್ತಂಬರಿಸೊಪ್ಪು, ಉಪ್ಪು ಇವಿಷ್ಟನ್ನು ಒಂದು ಅಗಲವಾದ ಪಾತ್ರೆಗೆ ಹಾಕಿಕೊಂಡು ಕೈಯಿಂದ ಚೆನ್ನಾಗಿ ಹಿಚುಕಿಕೊಳ್ಳಿ. ಇದಕ್ಕೆ ಅಕ್ಕಿಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟನ್ನು ನೀರು ಮಾಡಬೇಡಿ.
ನಿಮ್ಮ ಮನೆಯಲ್ಲಿ ಬಾಳೆ ಎಲೆ ಇದ್ದರೆ ಅದನ್ನು ಚೆನ್ನಾಗಿ ತೊಳೆದು ತುಸು ಎಣ್ಣೆ ಸವರಿ ಈ ಹಿಟ್ಟಿನ ಹದ ಗಾತ್ರದ ಉಂಡೆ ಮಾಡಿಕೊಂಡು ನಿಧಾನಕ್ಕೆ ತಟ್ಟಿ ಕಾದ ಕಾವಲಿಗೆ ಹಾಕಿ. ಇಲ್ಲದಿದ್ದರೆ ಅಂಗಡಿಯಲ್ಲಿ ಬಟರ್ ಪೇಪರ್ ಸಿಗುತ್ತದೆ. ಅದರಲ್ಲಿಯೂ ಕೂಡ ಸುಲಭವಾಗಿ ರೊಟ್ಟಿ ತಟ್ಟಬಹುದು. ಕಾದ ಕಾವಲಿಯಲ್ಲಿ ಎರಡು ಕಡೆ ಚೆನ್ನಾಗಿ ರೊಟ್ಟಿ ಬೇಯಿಸಿಕೊಳ್ಳಿ. ತುಪ್ಪದ ಜತೆ ಅಥವಾ ಕಾಯಿ ಚಟ್ನಿ ಜತೆ ಇದನ್ನು ಸವಿಯಲು ಸಖತ್ ರುಚಿಕರವಾಗಿರುತ್ತದೆ.