ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೆಣ್ಣುನಾಯಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಅಮಾನವೀಯ ಘಟನೆ ನವಿ ಮುಂಬೈನ ಕೋಪರ್‌ಖೈರಾನೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಹೆಣ್ಣು ನಾಯಿಯ ಮೇಲೆ ಅತ್ಯಾಚಾರವೆಸಗುತ್ತಿರುವುದನ್ನು ತೋರಿಸುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಪೋಸ್ಟ್ ಮಾಡಿರುವಂತೆ ಈ ವ್ಯಕ್ತಿ ಈ ಹಿಂದೆಯೂ ಇದೇ ರೀತಿಯ ಅಮಾನವೀಯ ಭಯಾನಕ ಕೃತ್ಯಗಳನ್ನು ಮಾಡಿ ಸಿಕ್ಕಿಬಿದ್ದಿದ್ದಾನೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.
“ಈ ಅಸ್ವಸ್ಥ ವ್ಯಕ್ತಿ ಕೋಪರ್ ಖೈರಾನೆಯಲ್ಲಿ ಹೆಣ್ಣು ನಾಯಿಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಕಳೆದ ಬಾರಿ ಕೆಲವು ಹುಡುಗರು ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆ ವ್ಯಕ್ತಿ ಕುಡಿದಿದ್ದ. ಆದರೆ ಎಂದಿನಂತೆ ಪೊಲೀಸರು ಸಹಾಯ ಮಾಡಲಿಲ್ಲ” ಎಂದು ವ್ಯಕ್ತಿಯ ಚಿತ್ರ ಮತ್ತು ಅವನು ಹೇಯ ಕೃತ್ಯವೆಸಗುತ್ತಿರುವ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಮುಂಬೈ ಪೊಲೀಸರು ಆರೋಪಿಯ ವಿರುದ್ಧ ಕೋಪರ್ ಖೈರಾನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ವಿರುದ್ಧ 377 ಐಪಿಸಿ 11(1) (ಎ) ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಸುಧೀರ್ ಕುಡಾಲ್ಕರ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಎಫ್‌ಐಆರ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಪ್ರಾಣಿಗಳ ವಿರುದ್ಧ ಅಮಾನವೀಯ ಕೃತ್ಯಗಳು ಭಾರತದಲ್ಲಿ ಸಾಮಾನ್ಯವಾಗಿದ್ದು ಹೆಚ್ಚುತ್ತಿರುವ ಪ್ರಾಣಿ ಹಿಂಸೆಯ ಇಂತಹ ನಿದರ್ಶನಗಳು ಆತಂಕಕ್ಕೆ ಕಾರಣವಾಗಿವೆ.
ಫೆಡರೇಶನ್ ಆಫ್ ಇಂಡಿಯನ್ ಅನಿಮಲ್ ಪ್ರೊಟೆಕ್ಷನ್ ಆರ್ಗನೈಸೇಷನ್ಸ್ ಮತ್ತು ಆಲ್ ಕ್ರಿಯೇಚರ್ಸ್ ಗ್ರೇಟ್ ಅಂಡ್ ಸ್ಮಾಲ್‌ನ ಡೇಟಾ ಪ್ರಕಾರ 2010 ಮತ್ತು 2020 ರ ನಡುವೆ ಭಾರತದಲ್ಲಿ ಪ್ರಾಣಿಗಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಒಳಗೊಂಡ 82 ಪ್ರಕರಣಗಳು ವರದಿಯಾಗಿವೆ.