ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಎದುರಾಗಿದೆ. ಹೊಸ ಸರ್ಕಾರ ರಚನೆಯಾಗುವವರೆಗೆ ಸಮಸ್ಯೆ ಮುಂದುವರೆಯಲಿದೆ. ಚುನಾವಣಾ ನೀತಿ ಸಂಹಿತೆ ಕಾರಣ ಟೆಂಡರ್ ವಿಳಂಬವಾಗಿದ್ದು, ಆಸ್ಪತ್ರೆಗಳಲ್ಲಿ ಔಷಧ ಕೊರತೆ ಕಂಡುಬಂದಿದೆ.
ಚುನಾವಣೆ ನೀತಿ ಸಂಹಿತೆ ಬಿಸಿ ಸರ್ಕಾರಿ ಆಸ್ಪತ್ರೆಗಳ ಔಷಧಗಳ ಮೇಲೆ ಪರಿಣಾಮವನ್ನುಂಟು ಮಾಡಿದ್ದು, ರೋಗಿಗಳಿಗೆ ವಿತರಿಸಲು ಔಷಧಗಳ ಕೊರತೆ ಕಂಡು ಬಂದಿದೆ. ಹೊರಗೆ ಔಷಧ ಖರೀದಿಸುವ ಪರಿಸ್ಥಿತಿ ಉಂಟಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಿಗೆ ರಿಯಾಯಿತಿ ದರದಲ್ಲಿ ಮತ್ತು ಉಚಿತವಾಗಿ ಔಷಧ ಪೂರೈಕೆ ಮಾಡುವ ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಅಂಡ್ ವೇರ್ ಹೌಸಿಂಗ್ ಸೊಸೈಟಿ ಉಗ್ರಾಣಗಳಲ್ಲಿಯೂ ಔಷಧದ ಕೊರತೆ ಕಂಡುಬಂದಿದ್ದು, ಜೀವ ರಕ್ಷಕ, ಅಗತ್ಯ ಔಷಧಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದೇ ಜನಸಾಮಾನ್ಯರು ಪರದಾಡುವಂತಾಗಿದೆ.
ಆರೋಗ್ಯ ಇಲಾಖೆ ವತಿಯಿಂದ ಪ್ರತಿನಿತ್ಯದ ಅಗತ್ಯ ಔಷಧಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಮತ್ತು ಆರೋಗ್ಯ ರಕ್ಷಾ ಸಮಿತಿ ಮೂಲಕ ಖರೀದಿ ಮಾಡುವಂತೆ ಸೂಚನೆ ನೀಡಲಾಗಿದೆ. ಆದರೆ, ಶೇಕಡ 50ರಷ್ಟು ಔಷಧಗಳು ಮಾತ್ರ ಸಿಗುತ್ತಿವೆ. ವಿಶೇಷ ಔಷಧಗಳನ್ನು ಸ್ಥಳೀಯವಾಗಿ ಖರೀದಿಸಲು ಸಾಧ್ಯವಿಲ್ಲ. ಅಂತಹ ಔಷಧಿಗಳನ್ನು ಆರೋಗ್ಯ ಇಲಾಖೆಯಿಂದಲೇ ಪೂರೈಕೆ ಮಾಡಬೇಕಿದ್ದು, ಚುನಾವಣೆ ನೀತಿ ಸಂಹಿತೆ ಕಾರಣ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ.
ಪ್ರತಿ ವರ್ಷ ಏಪ್ರಿಲ್ ನಲ್ಲಿ ಟೆಂಡರ್ ಕರೆಯಲಾಗುತ್ತದೆ. ಈ ವರ್ಷ ನೀತಿ ಸಂಹಿತೆ ಕಾರಣ ಟೆಂಡರ್ ಕರೆದಿಲ್ಲ. ಹೊಸ ಸರ್ಕಾರ ಬರುವವರೆಗೂ ತೊಂದರೆ ಉಂಟಾಗಲಿದೆ. ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಆರೋಗ್ಯ ಇಲಾಖೆ ಕೆಲವು ಅಗತ್ಯ ಔಷಧಗಳ ಖರೀದಿಗೆ ಅನುಮತಿ ನೀಡುವಂತೆ ಮನವಿ ಮಾಡಿದೆ.