ಚಿತ್ರದುರ್ಗ : ನಾನು ರೈತರ ಕುಟುಂಬದ ಹಿನ್ನಲೆಯಿಂದ ಬಂದವನು, ರೈತರ ಸಮಸ್ಯೆ ಅರಿತಿದ್ದೇನೆ. ರಾಜ್ಯದ 31 ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಜಿಲ್ಲೆ ಚಿತ್ರದುರ್ಗ. ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಬರ ಪರಿಸ್ಥಿತಿಯ ವಸ್ತು ಸ್ಥಿತಿ ವರದಿ ಸಿದ್ದವಾಗಿದ್ದು, ಇನ್ನೂ ಎರಡು ತಾಲ್ಲೂಕುಗಳ ವಾಸ್ತವ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಪೀಡಿತ ತಾಲ್ಲೂಕುಗಳ ಘೋಷಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ರೈತರು ಯಾರು ಆತಂಕ ಪಡಬೇಡಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ರೈತರಿಗೆ ಭರವಸೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕೃಷಿ ತಜ್ಞರು, ಪ್ರಗತಿಪರ ಕೃಷಿಕರು, ಕೃಷಿ ಸಾಧಕರು ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ರೈತರ ಆಶೀರ್ವಾದದಿಂದ ರಚನೆಯಾಗಿದ್ದು, ಸರ್ಕಾರ ರೈತರ ಪರವಿದೆ. ರೈತರು ಸಲ್ಲಿಸಿರುವ ಮನವಿ, ಸಲಹೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಧ್ಯಯನ ಮಾಡಿ, ಸಮಸ್ಯೆಯನ್ನು ಸಂಪೂರ್ಣ ವಿಮರ್ಶೆ ಮಾಡಿ, ಶೇ.100ರಷ್ಟು ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಬೆಳೆವಿಮೆ ನೋಂದಣಿಗಾಗಿ ರೈತರು ರೂ.1265 ಕೋಟಿ ಹಣ ಪಾವತಿಸಿ ಬೆಳೆ ವಿಮಾ ಕಂತು ಹಣ ಪಾವತಿಸಿದ್ದಾರೆ. ರೂ.8661 ಕೋಟಿ ಹಣ ರೈತರಿಗೆ ಮರುಪಾವತಿಯಾಗಿದೆ. ಹೀಗಾಗಿ ಒಟ್ಟು 7396 ಕೋಟಿ ರೂ. ಹಣ ಬೆಳೆವಿಮೆಯಿಂದ ಸಿಕ್ಕಿದಂತಾಗಿದೆ. ಬೆಳೆವಿಮೆಯ ಮಾನದಂಡಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ವಿಮಾ ಕಂಪನಿಗಳ ಜೊತೆ ಚರ್ಚಿಸಿ ಸರಿಪಡಿಸುವ ಕೆಲಸ ಮಾಡಲಾಗುವುದು. ಜಿಲ್ಲಾಮಟ್ಟದ ಸಮಸ್ಯೆಗಳನ್ನು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಬಗೆಹರಿಸಲಿದ್ದಾರೆ ಎಂದರು.
ರಾಜ್ಯ ಸರ್ಕಾರವು ಆಗಸ್ಟ್ 1 ರಿಂದ ರೂ.3 ಲಕ್ಷದಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿದರಲ್ಲಿ ಸಾಲಸೌಲಭ್ಯ ನೀಡುತ್ತಿದ್ದು, ರೂ.15 ಲಕ್ಷದವರೆಗೂ ಶೇ.3ರ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದೆ ಎಂದರು. ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ರಾತ್ರಿಯ ಬದಲು ಹಗಲು ವೇಳೆಯಲ್ಲಿ ವಿದ್ಯುತ್ ಸರಬರಾಜು ಪೂರೈಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.
ಗೃಹ ಲಕ್ಷ್ಮೀ ಯೋಜನೆಗೆ ಆ. 30 ರಂದು ಚಾಲನೆ ನೀಡಲಾಗುತ್ತಿದೆ. ರಾಜ್ಯದ 01. 10 ಕೋಟಿ ಕುಟುಂಬಗಳು ಯೋಜನೆಯ ಫಲಾನುಭವಿಗಳಾಗಿದ್ದಾರೆ. ನೊಂದಣಿ ಮಾಡಿಕೊಂಡಿರುವ ಪ್ರತಿ ಕುಟುಂಬದ ಮನೆಯ ಯಜಮಾನಿಗೆ ಆ.30ರಂದು ರೂ.2000 ಹಣ ಜಮೆ ಮಾಡಲಾಗುತ್ತದೆ. ರೈತರ ಸಾಲಮನ್ನ ಮಾಡಿದ್ದರೂ ಕೂಡ ರೂ.10 ಸಾವಿರ ಕೋಟಿ ವ್ಯಯ ಮಾಡಲಾಗುತ್ತಿತ್ತು. ಆದರೆ ಗೃಹಲಕ್ಷ್ಮೀ ಯೋಜನೆಗೆ ರೂ.32 ಸಾವಿರ ಕೋಟಿ ಹಣವನ್ನು ಕುಟುಂಬಗಳಿಗೆ ಪಾವತಿಸಲಾಗುತ್ತಿದೆ ಎಂದರು.