
ಬೆಂಗಳೂರು: ಕಾಂಗ್ರೆಸ್ ನ 40-45 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿಕೆಗೆ ಸ್ವಲ್ಪ ದಿನದಲ್ಲೇ ಎಲ್ಲವೂ ಗೊತ್ತಾಗುತ್ತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಸ್ವಲ್ಪ ದಿನ ಕಾದು ನೋಡಿ… ಯಾರ ಸಂಪರ್ಕದಲ್ಲಿ ಯಾರಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇನ್ನೂ ವಿಪಕ್ಷ ನಾಯಕನ ಆಯ್ಕೆಯನ್ನೇ ಮಾಡಿಲ್ಲ. ಸಂವಿಧಾನಾತ್ಮಕವಾಗಿ ವಿಪಕ್ಷ ನಾಯಕ ಇರಬೇಕು. ವಿಪಕ್ಷ ನಾಯಕನ ಆಯ್ಕೆ ವಿಳಂಬದಿಂದಲೇ ಅವರ ಪಕ್ಷದ ಆಂತರಿಕ ವಿಚಾರ ಹೇಗಿದೆ ಎಂಬುದು ಗೊತ್ತಾಗುತ್ತಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಈ ರೀತಿ ಎಂದೂ ಆಗಿರಲಿಲ್ಲ. ಈ ಹಿಂದೆ ಬಿಜೆಪಿಯವರು ನಮಗೆ ಹೇಳುತ್ತಿದ್ದರು. ಕಾಂಗ್ರೆಸ್ ನವರು ಎಲ್ಲದಕ್ಕೂ ದೆಹಲಿ ಕಡೆ ನೋಡುತ್ತಿದ್ದಾರೆ ಎಂದು… ಈಗ ಬಿಜೆಪಿ ಸ್ಥಿತಿಯೇ ಹಾಗಾಗಿದೆ. ಬಿಜೆಪಿಯವರು ದೆಹಲಿ ಕಡೆ ನೋಡುವಂತಾಗಿದೆ ಎಂದು ತಿರುಗೇಟು ನೀಡಿದರು.