ನವದೆಹಲಿ: ನ್ಯಾಯ ಪೀಠಕ್ಕೆ ವಿಚಾರಣೆ ನೀಡುವಾಗ ಘನತೆಯಿಂದ ಹೌದು ಎನ್ನುವ ಬದಲು ಅನೌಪಚಾರಿಕವಾಗಿ ಯಾ ಯಾ ಎಂದು ಪದ ಬಳಕೆ ಮಾಡಿದ ವಕೀಲರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ರೀತಿಯ ಹಾವಭಾವದ ಪದಗಳು ಎಂದರೆ ತಮಗೆ ಅಲರ್ಜಿ ಎಂದು ಅವರು ಹೇಳಿದ್ದಾರೆ. ಇದು ಕಾಫಿ ಶಾಪ್ ಅಲ್ಲ, ಕೋರ್ಟ್ ಕೊಠಡಿ ಎಂಬುದು ಗಮನದಲ್ಲಿರಲಿ ಎಂದು ವಕೀಲರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪ್ರಕರಣ ಒಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರು, ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ನಾಗರಿಕರು ಸಂವಿಧಾನಾತ್ಮಕ ಪರಿಹಾರ ಕೋರುವ ಹಕ್ಕಿನ ಕುರಿತು 32ನೇ ವಿಧಿ ಸಾಂವಿಧಾನಿಕ ಖಾತರಿ ನೀಡಿದೆ. ಇದು ಅಂತಹ ಅರ್ಜಿಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಕೀಲರು, ಯಾ.. ಯಾ… ಆಗಿನ ಸಿಜೆಐ ರಂಜನ್ ಗೊಗೊಯ್ ನನಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು ಎಂದು ಹೇಳಿದ್ದು, ಅವರ ಮಾತನ್ನು ಅರ್ಧದಲ್ಲಿಯೇ ತಡೆದ ಸಿಜೆಐ ಚಂದ್ರಚೂಡ್, ಇದು ಕಾಫಿ ಶಾಪ್ ಅಲ್ಲ, ಏನಿದು ಯಾ ಯಾ…? ಇದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿ ತರಾಟೆಗೆ ತೆಗದುಕೊಂಡಿದ್ದಾರೆ. ನ್ಯಾಯಾಲಯದ ಕೊಠಡಿ ಶಿಷ್ಟಾಚಾರಗಳ ಬಗ್ಗೆ ನೆನಪಿಸಿದ್ದಾರೆ.