ವೈದ್ಯಕೀಯ ಲೋಕದಲ್ಲಿ ಒಂದಿಲ್ಲೊಂದು ಹೊಸ ಹೊಸ ಆವಿಷ್ಕಾರಗಳಾಗುತ್ತಲೇ ಇರುತ್ತವೆ. ಇದೀಗ ತಂಜಾವೂರು ಖಾಸಗಿ ಆಸ್ಪತ್ರೆಯ ವೈದ್ಯರು ಅದ್ಭುತ ಸಾಧನೆ ಮಾಡಿದ್ದಾರೆ. 14 ವರ್ಷದ ಬಾಲಕಿಯ ಶ್ವಾಸಕೋಶದಲ್ಲಿದ್ದ 4 ಸೆಂಮೀ ಉದ್ದದ ಸೂಜಿಯನ್ನು ಕೇವಲ ಮೂರೂವರೆ ನಿಮಿಷಗಳಲ್ಲಿ ಹೊರತೆಗೆದಿದ್ದಾರೆ. ಈ ಪ್ರಕ್ರಿಯೆಗೆ ವೈದ್ಯರು ಚಾಕು ಸಹ ಬಳಸಿಲ್ಲ ಎಂಬುದು ಗಮನಾರ್ಹ.
ಡ್ರೆಸ್ಸಿಂಗ್ ಮಾಡುವ ಸಂದರ್ಭದಲ್ಲಿ ಬಾಲಕಿ ಆಕಸ್ಮಿಕವಾಗಿ ಸೂಜಿಯನ್ನು ನುಂಗಿಬಿಟ್ಟಿದ್ದಳು. ಚಾಕು ಮತ್ತು ಕತ್ತರಿಯಂತಹ ಸಾಧನಗಳನ್ನು ಬಳಸದೆ ಆಧುನಿಕ ಬ್ರಾಂಕೋಸ್ಕೋಪಿ ಎಂಬ ವಿಧಾನದ ಮೂಲಕ ವೈದ್ಯರು ತಕ್ಷಣವೇ ಈ ಸೂಜಿಯನ್ನು ಹೊರತೆಗೆದಿದ್ದಾರೆ. ತಮಿಳುನಾಡಿನ ತಂಜಾವೂರು ಆಸ್ಪತ್ರೆಯಲ್ಲಿ ನಡೆದ ಘಟನೆ ಇದು. ವೈದ್ಯರ ಕಾರ್ಯವೈಖರಿ ಮತ್ತು ಸಮಯ ಪ್ರಜ್ಞೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿಕಿತ್ಸೆಯ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್ ಆಗಿದೆ.