
ಬೆಳಗಾವಿ: ಹೆರಿಗೆಗೆಂದು ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬರಿಗೆ ವೈದ್ಯರು ಆಪರೇಷನ್ ಮಾಡಿದ ನಂತರ ಬಟ್ಟೆ ಮತ್ತು ಹತ್ತಿ ಉಂಡೆಯನ್ನು ಹೊಟ್ಟೆಯಲ್ಲಿಯೇ ಬಿಟ್ಟು ಹೊಲಿಗೆ ಹಾಕಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗರ್ಭಿಣಿಯಾಗಿದ್ದ ಶ್ರುತಿ ಬಡಿಗೇರ ಫೆಬ್ರವರಿ 7ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಹೆರಿಗೆ ಮಾಡಿಸಿದ ನಂತರ ಬಾಣಂತಿಯ ಹೊಟ್ಟೆಯಲ್ಲಿಯೇ ಕಾಟನ್ ವೇಸ್ಟ್ ಮತ್ತು ಬಟ್ಟೆಯನ್ನು ಬಿಟ್ಟು ಹೊಲಿಗೆ ಹಾಕಿ ಮನೆಗೆ ಕಳುಹಿಸಿದ್ದಾರೆ. ಕೆಲ ದಿನಗಳ ಬಳಿಕ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ತಪಾಸಣೆ ನಡೆಸಿದಾಗ ಹೊಟ್ಟೆಯಲ್ಲಿ ವೇಸ್ಟ್ ಬಟ್ಟೆ ಮತ್ತು ಹತ್ತಿ ಪತ್ತೆಯಾಗಿದೆ. ಅದನ್ನು ಹೊರ ತೆಗೆದು ಹೊಲಿಗೆ ಹಾಕಲಾಗಿದೆ. ಚಿಕ್ಕೋಡಿ ವೈದ್ಯರು ಆಪರೇಷನ್ ವೇಳೆ ಮಾಡಿದ ಎಡವಟ್ಟು ಪತ್ತೆಯಾಗಿದೆ.