
ಮೆಣಸಿನ ಕಾಯಿ ಬಜ್ಜಿ, ಬಾಳೆಕಾಯಿ ಬಜ್ಜಿ, ಹೀರೆಕಾಯಿ ಬಜ್ಜಿ… ಆಹಾ! ಬಜ್ಜಿಯ ಹೆಸರುಗಳನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುವುದು ಗ್ಯಾರೆಂಟಿ. ಅದರಲ್ಲೂ ಚಳಿಗಾಲದಲ್ಲಿ ಬಿಸಿ ಬಿಸಿ ಬಜ್ಜಿ ಕೈಯಲ್ಲಿ ಹಿಡಿದರೆ ಎಷ್ಟು ತಿಂದಿದ್ದೇವೆ ಅನ್ನೋ ಲೆಕ್ಕ ಎಣಿಕೆಗೆ ಸಿಗುವುದಿಲ್ಲ.
ಕಡಲೆಹಿಟ್ಟು ಹೆಚ್ಚು ಸೇವಿಸಿದಷ್ಟು ಹೊಟ್ಟೆ ಉಬ್ಬರ, ಅಜೀರ್ಣದಂತಹ ಸಮಸ್ಯೆ ಕಾಡಬಹುದು. ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಸ್ವಲ್ಪ ಮಂದವಾಗಿ ಹಸಿವೆ ಕಡಿಮೆಯಾಗಬಹುದು, ಹೊಟ್ಟೆ ಭಾರ ಅನ್ನಿಸಬಹುದು. ಅದರಲ್ಲೂ ವಯಸ್ಸಾದವರು ರಾತ್ರಿ ವೇಳೆ ಕಡಲೇ ಹಿಟ್ಟಿನ ಬಜ್ಜಿ ಬೋಂಡಾ ಒಂದೆರಡು ಹೆಚ್ಚಾಗಿ ತಿಂದರಂತೂ ಹೊಟ್ಟೆ ಕೆಡುವುದು ಖಂಡಿತಾ.
ಇಂತಹ ಸಮಸ್ಯೆಗೆ ರಾಮಬಾಣದ ಹಾಗೆ ಓಂಕಾಳು ಕಡಲೇ ಹಿಟ್ಟಿಗೆ ಹಾಕಿ ಬಜ್ಜಿ ಮಾಡಿದರೆ ಅಜೀರ್ಣದ ಸಮಸ್ಯೆ ಕಾಡುವುದಿಲ್ಲ. ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೂ ಓಂಕಾಳಿನ ನೀರು ಶಮನಕಾರಿ.