ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಕಳವಳಕಾರಿ ಸಂಗತಿ. ಮಧುಮೇಹ ರೋಗಿಗಳು ಸಕ್ಕರೆ ಸೇವಿಸಬಾರದು, ಸಿಹಿ ಪದಾರ್ಥಗಳನ್ನು ತಿನ್ನುವಂತಿಲ್ಲ. ಮಧುಮೇಹ ಬಗ್ಗೆ ಭಯಪಟ್ಟುಕೊಂಡು ಜನರು ಈ ಕಾಯಿಲೆಯಿಂದ ಪಾರಾಗಲು ಸಕ್ಕರೆಯಿಂದಲೇ ದೂರ ಉಳಿಯಲು ಪ್ರಾರಂಭಿಸುತ್ತಾರೆ. ಆದರೆ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸುವುದು ಸರಿಯಲ್ಲ. ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಸಕ್ಕರೆಯಲ್ಲಿ ಎರಡು ವಿಧಗಳಿವೆ. ಒಂದು ನೈಸರ್ಗಿಕ ಮತ್ತು ಇನ್ನೊಂದು ಸಂಸ್ಕರಿಸಿದ ಸಕ್ಕರೆ. ಮಾವು, ಅನಾನಸ್, ಲಿಚಿ, ತೆಂಗಿನಕಾಯಿಯಂತ ವಸ್ತುಗಳಿಂದ ನಾವು ನೈಸರ್ಗಿಕ ಸಕ್ಕರೆಯನ್ನು ಪಡೆಯುತ್ತೇವೆ. ಆದರೆ ಸಂಸ್ಕರಿಸಿದ ಸಕ್ಕರೆಯನ್ನು ಕಬ್ಬು ಮತ್ತು ಬೀಟ್‌ರೂಟ್‌ನಿಂದ ತಯಾರಿಸಲಾಗುತ್ತದೆ. ಸಕ್ಕರೆಯನ್ನು ಸಂಪೂರ್ಣ ತ್ಯಜಿಸುವ ಬದಲು ಅದನ್ನು ಮಿತವಾಗಿ ಸೇವನೆ ಮಾಡಬೇಕು.
ಕಬ್ಬು ಮತ್ತು ಸಿಹಿ ಬೀಟ್‌ರೂಟ್‌ನಿಂದ ಸಂಸ್ಕರಿಸಿದ ಸಕ್ಕರೆಯಲ್ಲಿ ಕ್ಯಾಲೋರಿ ತುಂಬಾ ಜಾಸ್ತಿಯಿರುತ್ತದೆ. ಪೌಷ್ಠಿಕಾಂಶವಿರುವುದಿಲ್ಲ. ಆದರೆ ನೈಸರ್ಗಿಕ ಸಕ್ಕರೆಯಲ್ಲಿ ವಿಟಮಿನ್ ಮತ್ತು ಖನಿಜಗಳು ಹೇರಳವಾಗಿ ಕಂಡುಬರುತ್ತವೆ. ಹಾಗಾಗಿ ದೈನಂದಿನ ಆಹಾರದಲ್ಲಿ ಸಿಹಿಯನ್ನು ಸಂಪೂರ್ಣವಾಗಿ ತ್ಯಜಿಸುವುದು ಸೂಕ್ತವಲ್ಲ.
ಸಕ್ಕರೆ ಸೇವನೆಯನ್ನು ಹಠಾತ್ತನೆ ನಿಲ್ಲಿಸಿದರೆ ದೇಹದ ಮೇಲೆ ವಿಪರೀತ ಪರಿಣಾಮಗಳಾಗುತ್ತವೆ. ಬೇಗನೆ ದಣಿವಾಗುತ್ತದೆ, ಯಾವಾಗಲೂ ತಲೆನೋವು ಕೂಡ ಕಾಡಬಹುದು. ಇದು ಕಿರಿಕಿರಿ ಉಂಟುಮಾಡುತ್ತದೆ. ಸಿಹಿ ಶಕ್ತಿಯ ಮೂಲವಾಗಿರುವುದರಿಂದ ಅದನ್ನು ತ್ಯಜಿಸಿದರೆ ಆಯಾಸವಾಗುವುದು ಸಹಜ. ಸಕ್ಕರೆಯನ್ನು ತ್ಯಜಿಸಿದ ನಂತರ ಹೆಚ್ಚುವರಿ ಇನ್ಸುಲಿನ್ ದೇಹದಿಂದ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಸಂಸ್ಕರಿಸಿದ ಸಕ್ಕರೆ ತಿನ್ನುವುದನ್ನು ನಿಲ್ಲಿಸಿದರೂ ಸಹ, ಸಿಹಿ ಹಣ್ಣುಗಳನ್ನು ಸೇವಿಸುವುದನ್ನು ಮುಂದುವರಿಸಿ. ಇದು ನಿಮಗೆ ನೈಸರ್ಗಿಕ ಸಕ್ಕರೆಯನ್ನು ನೀಡುತ್ತದೆ ಮತ್ತು ದೇಹವನ್ನು ಶಕ್ತಿಯುತವಾಗಿರಿಸುತ್ತದೆ.