ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಾಣಿ ಆನೆ. ಈ ಪ್ರಾಣಿಗಳಲ್ಲಿ ಏಷ್ಯಾ ಆನೆಗಳು ಹಾಗೂ ಆಫ್ರಿಕಾದ ಆನೆಗಳು ಎನ್ನುವ ಎರಡು ವಿಧಗಳಿವೆ.
ಆಫ್ರಿಕಾದ ಆನೆಗಳಲ್ಲಿ ಫಾರೆಸ್ಟ್ ಎಲಿಫೆಂಟ್ ಹಾಗೂ ಬುಷ್ ಎಲಿಫೆಂಟ್ ಎಂಬ ಎರಡು ಬಗೆಗಳಿವೆ. ಆಫ್ರಿಕಾದ ಆನೆಗಳಲ್ಲಿ ಸ್ತ್ರೀ-ಪುರುಷ ಎರಡರಲ್ಲೂ ದಂತಗಳಿರುತ್ತವೆ. ಏಷ್ಯಾದ ಆನೆಗಳಲ್ಲಿ ಗಂಡು ಮಾತ್ರ ದಂತವನ್ನು ಹೊಂದಿರುತ್ತದೆ.
ಒಂದು ಸಲಕ್ಕೆ ಆನೆ ಎರಡು ನೂರು ಲೀಟರ್ ಗಳಷ್ಟು ನೀರನ್ನು ಕುಡಿಯುತ್ತದೆ. ಕುಡಿದ ನೀರಿಗಿಂತ ತನ್ನ ಸೊಂಡಿಲಿನಿಂದ ಮೈಮೇಲೆ ಸುರಿದುಕೊಳ್ಳುವ ನೀರಿನ ಪ್ರಮಾಣ ಹೆಚ್ಚು. ಆನೆಯ ಸೊಂಡಿಲು 140 ಕಿಲೋಗಳಷ್ಟಿರುತ್ತದೆ. ಅದರಲ್ಲಿ ಸರಿ ಸುಮಾರು ಒಂದು ಲಕ್ಷದಷ್ಟು ಸ್ನಾಯುಗಳು ಇರುತ್ತವೆ.
ಆಶ್ಚರ್ಯವೆಂದರೆ ಅಷ್ಟು ದೊಡ್ಡ ಭಾಗದಲ್ಲಿ ಒಂದೇ ಒಂದು ಮೂಳೆ ಸಹ ಇರುವುದಿಲ್ಲ. ನೀರಿನಲ್ಲಿ ಈಜುವಾಗ ಸೊಂಡಿಲನ್ನು ನೀರಿನ ಮೇಲೆತ್ತಿ ಗಾಳಿ ಹೀರುತ್ತವೆ. ಇವು ಅತ್ಯಂತ ಸಾಧು ಪ್ರಾಣಿಗಳು. ಎಲೆಗಳು, ಗಿಡದ ಬೇರು, ಎಳೆಯದಾದ ಬಿದಿರು ಇವುಗಳ ಆಹಾರ. ಇವು ದಿನಕ್ಕೆ 16 ಗಂಟೆಗಳು ಆಹಾರ ಶೇಖರಣೆಗಾಗಿ ಕಾಲ ಕಳೆಯುತ್ತವೆ. ಹೆಣ್ಣು ಆನೆಗಳನ್ನು ‘ಕೌ’ಎಂದು ಕರೆಯುತ್ತಾರೆ. ಆನೆಗಳು 22 ತಿಂಗಳುಗಳ ಕಾಲ ಗರ್ಭ ಹೊತ್ತು ನಂತರ ಮಕ್ಕಳನ್ನು ಹೆರುತ್ತವೆ.