ಟೀಂ ಇಂಡಿಯಾದ ಜೆರ್ಸಿ ಮೇಲೆ ಬೈಜು ಲಾಂಛನವಿದ್ದ ಕಾಲವೊಂದಿತ್ತು. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ರು. ಆದರೆ ಕೇವಲ ಒಂದೇ ವರ್ಷದಲ್ಲಿ ಬೈಜೂಸ್ ಸಂಪೂರ್ಣ ದಿವಾಳಿಯಾಗಿದೆ. ಬೈಜೂಸ್ ಮಾಲೀಕ ಬೈಜು ರವೀಂದ್ರನ್ ಖಾತೆ ಖಾಲಿಯಾಗಿದೆ. ಅವರ ನಿವ್ವಳ ಮೌಲ್ಯ ಶೂನ್ಯವಾಗಿದೆ.
ಒಂದೇ ವರ್ಷದಲ್ಲಿ ಬೈಜು ರವೀಂದ್ರನ್ ದಿವಾಳಿಯಾಗಿದ್ಹೇಗೆ?
ಒಂದು ವರ್ಷದ ಹಿಂದೆ ರವೀಂದ್ರನ್ ಅವರ ನಿವ್ವಳ ಮೌಲ್ಯ ಸುಮಾರು 2.1 ಶತಕೋಟಿ ಡಾಲರ್ ಇತ್ತು. ಆದ್ರೀಗ ಸಂಪತ್ತು ಶೂನ್ಯವಾಗಿದ್ದು, ಉದ್ಯೋಗಿಗಳಿಗೆ ಸಂಬಳ ನೀಡಲು ಮನೆಯನ್ನು ಅಡವಿಟ್ಟಿದ್ದಾರೆ. ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಿಂದ ರವೀಂದ್ರನ್ ಹೊರಗುಳಿದಿದ್ದಾರೆ. ಕಂಪನಿಯ ಮೌಲ್ಯ 1 ಬಿಲಿಯನ್ ಡಾಲರ್‌ಗೆ ಇಳಿದಿದೆ. ಕಂಪನಿ ಈಗ ಬಹುತೇಕ ಪತನದ ಅಂಚಿನಲ್ಲಿದೆ. ದೇಶಾದ್ಯಂತ ಬೈಜೂಸ್‌ನ ಕಚೇರಿ ಮತ್ತು ಟ್ಯೂಷನ್ ಸೆಂಟರ್‌ಗಳನ್ನು ಮುಚ್ಚಲಾಗುತ್ತಿದೆ, ಸಿಬ್ಬಂದಿಗೆ ಸಂಬಳವೂ ಸಿಗುತ್ತಿಲ್ಲ.
ಕೇರಳದ ಕಣ್ಣೂರು ಜಿಲ್ಲೆಯ ಅಝಿಕೋಡ್ ಗ್ರಾಮದ ನಿವಾಸಿ ರವೀಂದ್ರನ್ ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದರು. ರಜಾ ದಿನಗಳಲ್ಲಿ ಗೆಳೆಯರಿಗೆ ಕೋಚಿಂಗ್ ಕೊಡುತ್ತಿದ್ದರು. ಅವರಿಂದ ಕಲಿತವರು ಐಐಎಂನಲ್ಲಿ ತೇರ್ಗಡೆಯಾದರು. ರವೀಂದ್ರನ್ ಕೂಡ ಮತ್ತೆ ಐಐಎಂ ಪರೀಕ್ಷೆ ಬರೆದರು. ಶೇ.100ರಷ್ಟು ಅಂಕ ಪಡೆದರು. ಆದರೆ ಅವರು ಐಐಎಂ ಬದಲಿಗೆ ಟ್ಯೂಷನ್ ಕಲಿಸಲು ನಿರ್ಧರಿಸಿದರು. ಅವರ ಪಾಠದ ರೀತಿ ಎಷ್ಟು ಚೆನ್ನಾಗಿತ್ತು ಎಂದರೆ ಮಕ್ಕಳು ಸಾಲುಗಟ್ಟಿ ನಿಲ್ಲತೊಡಗಿದರು.
ಮಕ್ಕಳ ಸಂಖ್ಯೆ ಹೆಚ್ಚಾದಂತೆ ಮನೆಯ ಕೋಣೆ ಚಿಕ್ಕದಾಗಲು ಪ್ರಾರಂಭಿಸಿತು. ರವೀಂದ್ರನ್ ವಾರದಲ್ಲಿ 9 ನಗರಗಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಏಕಕಾಲಕ್ಕೆ 25,000 ಮಕ್ಕಳಿಗೆ ಪಾಠ ಮಾಡಿದರು. 2009 ರಲ್ಲಿ ಅವರು CAT ನ ಆನ್‌ಲೈನ್ ವೀಡಿಯೊ ಆಧಾರಿತ ಕಲಿಕೆಯ ಕಾರ್ಯಕ್ರಮವನ್ನು ಪ್ರಾರಂಭಿಸಿದರು. 2011 ರಲ್ಲಿ, ಥಿಂಕ್ ಅಂಡ್ ಲರ್ನ್ ಎಂಬ ಕಂಪನಿಯನ್ನು ಆರಂಭಿಸಲಾಯ್ತು. 2015 ರಲ್ಲಿ ಅವರು ಬೈಜುಸ್, ದಿ ಲರ್ನಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು. ಈ ಸ್ಟಾರ್ಟ್ಅಪ್ ಅವರಿಗೆ ಗೇಮ್ ಚೇಂಜರ್ ಎಂದು ಸಾಬೀತಾಯಿತು. ರವೀಂದ್ರನ್ 7 ವರ್ಷಗಳಲ್ಲಿ ಕೋಟ್ಯಾಧಿಪತಿಯಾದರು.
2020 ರಲ್ಲಿ ಬೈಜೂಸ್ ವಿಶ್ವದ ಅತಿ ಹೆಚ್ಚು ಮೌಲ್ಯದ ಎಡ್ಟೆಕ್ ಸ್ಟಾರ್ಟ್ಅಪ್ ಎನಿಸಿಕೊಂಡಿತು. ಕಂಪನಿಯ ಮೌಲ್ಯ 85 ಸಾವಿರ ಕೋಟಿ ರೂಪಾಯಿ. ಕರೋನಾ ಸಮಯದಲ್ಲಿ ಬೈಜೂಸ್ ಭಾರೀ ಬೆಳವಣಿಗೆಯನ್ನು ಸಾಧಿಸಿತು. ಆಕಾಶ್ ಇನ್ಸ್‌ಟಿಟ್ಯೂಟ್, iRobotTutor, HashLearn, White Junior ಮತ್ತು Topper ನಂತಹ ಅನೇಕ ಕಂಪನಿಗಳನ್ನು ಖರೀದಿಸಿತು. ಈ ಮಧ್ಯೆ ಕಂಪನಿಯನ್ನು ಇನ್ನಷ್ಟು ವಿಸ್ತರಿಸಲು ಬೈಜೂಸ್ ದೊಡ್ಡ ಪ್ರಮಾಣದಲ್ಲಿ ಸಾಲವನ್ನು ತೆಗೆದುಕೊಳ್ಳಲು ಪ್ರಾರಂಭಿಸಿತ್ತು. 1.2 ಬಿಲಿಯನ್ ಡಾಲರ್ ಸಾಲದ ನಿರ್ಧಾರವು ಈ ಸಂಸ್ಥೆಯ ಪತನಕ್ಕೆ ಕಾರಣವಾಯ್ತು.
ಕರೋನಾ ನಂತರ ಶಾಲೆ-ಕಾಲೇಜುಗಳು ಪ್ರಾರಂಭವಾಗುತ್ತಿದ್ದಂತೆ ಬೈಜೂಸ್‌ಗೆ ದೊಡ್ಡ ಆಘಾತವೇ ಎದುರಾಯ್ತು. ವಿದ್ಯಾರ್ಥಿಗಳು ಬೈಜೂಸ್ ಅನ್ನು ಬಿಡಲಾರಂಭಿಸಿದರು. ಅದೇ ಸಮಯದಲ್ಲಿ US ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸಿತು. ಇದರಿಂದ ಸಾಲ ಪಡೆಯುವುದು ದುಬಾರಿಯಾಯಿತು. ಗಳಿಕೆ ಕಡಿಮೆಯಾಗಿ ನಷ್ಟ ಹೆಚ್ಚಾಗತೊಡಗಿತು. ಸಂಬಳ, ಕಚೇರಿ ನಿರ್ವಹಣೆ, ಟ್ಯೂಷನ್ ಸೆಂಟರ್ ಇವಕ್ಕೆಲ್ಲ ಪ್ರತಿ ತಿಂಗಳು 150 ಕೋಟಿ ಖರ್ಚು ಮಾಡುತ್ತಿದ್ದ ಸಂಸ್ಥೆ ಅದನ್ನು ಕೇವಲ 30 ಕೋಟಿಗೆ ಇಳಿಸಿತ್ತು. ಆದರೂ ಸಂಸ್ಥೆಗೆ ಪ್ರತಿ ತಿಂಗಳು 120-130 ಕೋಟಿ ರೂಪಾಯಿ ನಷ್ಟವಾಗುತ್ತಿತ್ತು.
ಬೈಜೂಸ್ ಸುಮಾರು 2 ಸಾವಿರ ಕೋಟಿ ರೂಪಾಯಿ ಸಂಬಳ ಬಾಕಿ ಇರಿಸಿಕೊಂಡಿದೆ. ಮಾರಾಟಗಾರರ ಪಾವತಿಯಲ್ಲಿ 200 ಕೋಟಿ ರೂಪಾಯಿಗಳ ಟಿಡಿಎಸ್ ಪಾವತಿಸಬೇಕಾಗಿದೆ. ಗ್ರಾಹಕರು ಸುಮಾರು 500 ಕೋಟಿ ರೂಪಾಯಿ ಮರುಪಾವತಿ ಮತ್ತು 1000 ಕೋಟಿ ರೂಪಾಯಿಗಳ ಮಾರಾಟಗಾರರ ಪಾವತಿಯನ್ನು ಮಾಡಬೇಕಾಗಿದೆ. ತನ್ನ ಉದ್ಯೋಗಿಗಳಿಗೆ ಸಂಬಳವನ್ನೂ ಕೊಡಲು ವಿಫಲವಾಗಿರುವ ಕಂಪನಿ ಇದೀಗ ಫೋನ್ ಮೂಲಕ ತನ್ನ ಸಿಬ್ಬಂದಿಯನ್ನು ವಜಾ ಮಾಡುತ್ತಿದೆ.