ಬೆಳಿಗ್ಗೆ ಎದ್ದ ತಕ್ಷಣ ಕೆಲವರಿಗೆ ಟೀ ಕಪ್ ಕೈನಲ್ಲಿರಬೇಕು. ಹಾಸಿಗೆಯಲ್ಲಿಯೇ ಟೀ ಕುಡಿಯುವವರಿದ್ದಾರೆ. ಬೆಡ್ ಟೀ ಇಲ್ಲವೆಂದರೆ ಹಾಸಿಗೆಯಿಂದ ಏಳಲು ಮೂಡ್ ಇರುವುದಿಲ್ಲ ಎನ್ನುವವರಿದ್ದಾರೆ. ಸೋಮಾರಿತನ-ತಲೆನೋವು ಹೋಗಲಾಡಿಸಲು ಅಥವಾ ಹೊಸ ದಿನವನ್ನು ಪ್ರಾರಂಭಿಸಲು ಅನೇಕರಿಗೆ ಚಹಾ ಬೇಕು. ಒಂದು ದಿನ ಚಹಾ ಸಿಗದಿದ್ದರೆ, ಅವರು ವಿಚಿತ್ರವಾದ ಚಡಪಡಿಕೆಯನ್ನು ಅನುಭವಿಸುತ್ತಾರೆ. ಬೆಡ್ ಟೀ ಚಟಕ್ಕೆ ಬಿದ್ದವರಾಗಿದ್ದರೆ ಸ್ವಲ್ಪ ಎಚ್ಚರದಿಂದಿರಬೇಕು. ಬೆಳಿಗ್ಗೆ ಎದ್ದ ತಕ್ಷಣ ಟೀ ಸೇವನೆ ಅಭ್ಯಾಸವಿದ್ದರೆ ಈ ಚಟದಿಂದ ಈಗ್ಲೇ ಹೊರ ಬನ್ನಿ. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ.
ಖಾಲಿ ಹೊಟ್ಟೆಯಲ್ಲಿ ಟೀ ಸೇವನೆ ಮಾಡುವುದ್ರಿಂದ ಬೊಜ್ಜು ಮತ್ತು ಒತ್ತಡ ಉಂಟಾಗುತ್ತದೆ. ಇದು ಅಲ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಚಹಾ, ಕೆಫೀನ್, ಎಲ್-ಥಿಯಾನೈನ್ ಮತ್ತು ಥಿಯೋಫಿಲಿನ್‌ನಂತಹ ಅಂಶಗಳನ್ನು ಒಳಗೊಂಡಿದೆ. ಇದು ಖಂಡಿತವಾಗಿಯೂ ನಿಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಆದರೆ ಇದು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಬೆಡ್ ಟೀ ಸೇವನೆ ನಿಮ್ಮನ್ನು ತಾಜಾಗೊಳಿಸಬಹುದು. ಆದ್ರೆ ಈ ಅಭ್ಯಾಸದಿಂದ ತಲೆನೋವು, ಸ್ನಾಯು ನೋವು, ಕೀಲು ನೋವು ಮತ್ತು ಹೆದರಿಕೆ ಉಂಟಾಗುವ ಸಾಧ್ಯತೆಯಿದೆ.
ಜೀರ್ಣಕ್ರಿಯೆ ಸಮಸ್ಯೆ : ಆಯುರ್ವೇದದ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಟೀ ಕುಡಿಯುವುದು ಪಿತ್ತರಸದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವಾಕರಿಕೆ ಸಮಸ್ಯೆ ಶುರುವಾಗುತ್ತದೆ. ಅನಾವಶ್ಯಕ ಭಯ ಕಾಡಲು ಶುರುವಾಗುತ್ತದೆ. ಬೆಡ್ ಟೀ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದು ಗ್ಯಾಸ್, ಅಸಿಡಿಟಿ, ಮಲಬದ್ಧತೆ, ಅಜೀರ್ಣ, ವಾಯು ಮತ್ತು ಹೊಟ್ಟೆ, ಎದೆ ಉರಿಗೆ ದಾರಿ ಮಾಡಿಕೊಡುತ್ತದೆ.
ಹೊಟ್ಟೆಯಲ್ಲಿ ಹುಣ್ಣು : ದೀರ್ಘಕಾಲದವರೆಗೆ ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಕುಡಿಯುವ ಅಭ್ಯಾಸ ಹುಣ್ಣುಗಳಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಬೆಡ್ ಟೀ ಕೂಡ ಹೈಪರ್ ಆಸಿಡಿಟಿಯ ಅಪಾಯವನ್ನು ಹೆಚ್ಚಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾವನ್ನು ಕುಡಿಯುವುದು ಹೊಟ್ಟೆಯ ಒಳ ಮೇಲ್ಮೈಯಲ್ಲಿ ಗಾಯದ ಸಮಸ್ಯೆಗೆ ಕಾರಣವಾಗುತ್ತದೆ. ಹುಣ್ಣನ್ನು ಗಾಯ ಎಂದು ಕರೆಯಲಾಗುತ್ತದೆ. ಈ ಗಾಯವು ಹೊಟ್ಟೆಯಲ್ಲಿ ಉಂಟಾಗುತ್ತದೆ. ಆದ್ದರಿಂದ ಇದನ್ನು ಪೆಪ್ಟಿಕ್ ಅಲ್ಸರ್ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಗಂಭೀರವಾಗಬಹುದು. ಇದನ್ನು ತಪ್ಪಿಸಲು, ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಕುಡಿಯುವ ಅಭ್ಯಾಸವನ್ನು ಬದಲಾಯಿಸಬೇಕು.
ವಾಯು ಸಮಸ್ಯೆ : ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಸೇವಿಸಿದ ನಂತರ ವಾಯು ಸಮಸ್ಯೆ ಕಾಡುತ್ತದೆ. ಹಾಲಿನ ಚಹಾ ಮತ್ತು ಕಪ್ಪು ಚಹಾ ಕೂಡ ವಾಯು ಉಂಟು ಮಾಡುತ್ತದೆ. ಕಪ್ಪು ಚಹಾವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೂ, ಇದು ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಆದರೆ ಹಾಲು ಅಥವಾ ಕಪ್ಪು ಚಹಾವನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ವಾಯು ಸಮಸ್ಯೆ ಕಾಡುತ್ತದೆ.
ಮೂಳೆ ಸಮಸ್ಯೆ : ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸವು ಮೂಳೆಗಳಿಗೆ ಹಾನಿಯುಂಟು ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ದೇಹದಲ್ಲಿನ ವಾತ ದೋಷ ಹೆಚ್ಚಾಗುತ್ತದೆ. ಇದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಕೀಲು ನೋವುಗಳು ಬಾಧಿಸಲು ಶುರುವಾಗುತ್ತವೆ.
ಒತ್ತಡಕ್ಕೆ ದಾರಿ : ಚಹಾ ಮತ್ತು ಕಾಫಿಯಲ್ಲಿ ಸಾಕಷ್ಟು ಕೆಫೀನ್ ಅಂಶವಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಕೋಪ, ಕಿರಿಕಿರಿ ಮತ್ತು ಒತ್ತಡ ಹೆಚ್ಚಾಗುತ್ತದೆ. ಕಾರಣವಿಲ್ಲದೆ ಸಿಟ್ಟು, ಕೋಪ ಬರಲು ಶುರುವಾಗುತ್ತದೆ.
ರಕ್ತದೊತ್ತಡ ರೋಗಿಗಳಿಗೆ ಅಪಾಯ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸವು ರಕ್ತದೊತ್ತಡದ ರೋಗಿಗಳಿಗೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಚಹಾದಲ್ಲಿ ಕೆಫೀನ್ ತುಂಬಾ ಹೆಚ್ಚಾಗಿದೆ. ಬೆಳಗಿನ ಚಹಾದಲ್ಲಿ ಇರುವ ಕೆಫೀನ್ ದೇಹದಲ್ಲಿ ವೇಗವಾಗಿ ಕರಗುತ್ತದೆ. ಇದು ಹೃದಯ ಬಡಿತವನ್ನು ಹೆಚ್ಚು ಮಾಡುವ ಅಪಾಯವಿದೆ. ಹಾಗೆ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ.