ಬೊಜ್ಜು ಈಗ ಸಾಮಾನ್ಯ ಎನ್ನುವಂತಾಗಿದೆ. ಹೊಟ್ಟೆ ಕರಗಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ. ಎಷ್ಟು ವ್ಯಾಯಾಮ ಮಾಡಿದ್ರೂ ಕೆಲವೊಮ್ಮೆ ಹೊಟ್ಟೆ ಕರಗೋದಿಲ್ಲ. ವ್ಯಾಯಾಮದ ಜೊತೆ ಡಯಟ್ ಬಹಳ ಮುಖ್ಯ ಪಾತ್ರವಹಿಸುತ್ತದೆ.
ಪ್ರತಿನಿತ್ಯದ ಆಹಾರದ ಜೊತೆ ತರಕಾರಿ, ಹಣ್ಣನ್ನು ಸೇವನೆ ಮಾಡುವುದ್ರಿಂದ ಬೊಜ್ಜನ್ನು ಸುಲಭವಾಗಿ ಕರಗಿಸಿಕೊಳ್ಳಬಹುದು. ಪ್ರತಿನಿತ್ಯ ಅಗತ್ಯವಾಗಿ ಈ ಕೆಲಸಗಳನ್ನು ಮಾಡಿದ್ರೆ ಬೊಜ್ಜು ಸುಲಭವಾಗಿ ಕರಗುತ್ತದೆ.
ಫೈಬರ್ ತೂಕ ಕರಗಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದ್ರ ಸೇವನೆಯಿಂದ ಸುಲಭವಾಗಿ ಬೊಜ್ಜು ಕರಗಿಸಿಕೊಳ್ಳಬಹುದಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಫೈಬರ್ ಅಂಶವಿರುವ ಹಣ್ಣು ಹಾಗೂ ತರಕಾರಿಯನ್ನು ಪ್ರತಿದಿನ ಸೇವನೆ ಮಾಡಿದ್ರೆ ತೂಕ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಯೋಗ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ 10ರಿಂದ 30 ನಿಮಿಷ ಯೋಗ ಮಾಡುವುದು ಒಳ್ಳೆಯದು. ಹೊಟ್ಟೆ ಕರಗಿಸಲು ವಿಶೇಷ ಯೋಗಾಸನಗಳಿದ್ದು, ಅದನ್ನು ಪ್ರತಿನಿತ್ಯ ಮಾಡಬೇಕು. ಇದು ಒತ್ತಡ ಕಡಿಮೆ ಮಾಡಿ ಬೊಜ್ಜು ಕರಗಲು ನೆರವಾಗುತ್ತದೆ.
ಪ್ರತಿನಿತ್ಯ ಕನಿಷ್ಠ 8 ಗಂಟೆ ನಿದ್ರೆ ಮಾಡಬೇಕು. ಇದು ಮಾನಸಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ನಿದ್ರೆ ಆರೋಗ್ಯ ವೃದ್ಧಿಗೆ ನೆರವಾಗುತ್ತದೆ. ಕಡಿಮೆ ನಿದ್ರೆ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ ಪ್ರತಿದಿನ ಸರಿಯಾಗಿ ನಿದ್ರೆ ಮಾಡಬೇಕು.
ಬೊಜ್ಜು ಕರಗಿಸಲು ನಾವು ಆ್ಯಕ್ಟಿವ್ ಆಗಿರುವುದು ಬಹಳ ಮುಖ್ಯ. ಲಿಫ್ಟ್ ಬದಲು ಮೆಟ್ಟಿಲು ಬಳಸಬಹುದು. ಜಿಮ್, ಈಜು ಸಾಧ್ಯವಾಗದೆ ಹೋದಲ್ಲಿ ಮನೆಯಲ್ಲಿಯೇ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ವ್ಯಾಯಾಮ ಮಾಡಬಹುದು.