ದಂತಗಳ ಸಹಾಯದಿಂದಲೇ ಮಾಡುವ ಪ್ರಾಣಾಯಾಮವನ್ನು ಸದಂತ ಪ್ರಾಣಾಯಾಮ ಎನ್ನಲಾಗುತ್ತದೆ. ಇದರಿಂದ ದೇಹದ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ಇಡೀ ದೇಹ ತಂಪಾಗುತ್ತದೆ. ಕಣ್ಣು, ಕಿವಿಗಳಿಗೆ ವಿಶ್ರಾಂತಿ ದೊರೆತು ಹಲ್ಲುಗಳು ಸದೃಢಗೊಳ್ಳುತ್ತವೆ. ಜೊತೆಗೆ ಬಾಯಾರಿಕೆ, ಹಸಿವು ಸಮಸ್ಯೆ ನಿವಾರಣೆಯಾಗುತ್ತದೆ.
ಹಲ್ಲುಗಳು ಮತ್ತು ವಸಡುಗಳು ಆರೋಗ್ಯವಾಗಿರುತ್ತವೆ. ಅಧಿಕ ರಕ್ತದೊತ್ತಡ ಮತ್ತು ಅಸಿಡಿಟಿ ಕಡಿಮೆಯಾಗಿ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.
ಈ ಆಸನವನ್ನು ಮಾಡುವುದು ತುಂಬಾ ಸುಲಭ. ಮೊದಲಿಗೆ ಸುಖಾಸನದಲ್ಲಿ ಸ್ಥಿರವಾಗಿ ನೇರವಾಗಿ ಕುಳಿತುಕೊಂಡು ಎರಡು ಹಸ್ತಗಳನ್ನು ಮಂಡಿಗಳ ಮೇಲೆ ಒತ್ತಿ ಮೇಲಿರಿಸಿ. ಈಗ ಕೆಳಗಿನ ಮತ್ತು ಮೇಲಿನ ದವಡೆ ಹಲ್ಲುಗಳನ್ನು ಪರಸ್ಪರ ಸೇರಿಸಿ. ಆದರೆ ಹೆಚ್ಚು ಬಿಗಿಗೊಳಿಸಬಾರದು. ತುಟಿಗಳನ್ನು ಸ್ವಲ್ಪ ಅಗಲಗೊಳಿಸಿ ನಾಲಿಗೆಯ ತುದಿಯನ್ನು ಹಲ್ಲಿನ ಹಿಂಭಾಗಕ್ಕೆ ತಾಗಿಸಬೇಕು. ನಿಧಾನವಾಗಿ ಹಲ್ಲುಗಳ ನಡುವೆ ಇರುವ ಸಂಧಿಗಳ ಮೂಲಕ ಉಸಿರು ತೆಗೆದುಕೊಳ್ಳಿ.
ತಂಪಾದ ಉಸಿರು ಬಾಯಿಂದ ಗಂಟಲಿನವರೆಗೆ ಪ್ರತಿ ಹಲ್ಲುಗಳ ಸಂಧಿಗೂ ತಾಕುವಂತಿರಬೇಕು ಹಾಗೂ ಶ್ವಾಸಕೋಶದೆಡೆಗೆ ಹರಿಯುತ್ತಿರುವುದನ್ನು ಆಸ್ವಾದಿಸಿ. ನಂತರ ತುಟಿಗಳನ್ನು ಮುಚ್ಚಿ ಮೂಗಿನ ಮೂಲಕ ಉಸಿರು ಬಿಡಿ. ಇದೇ ರೀತಿ 9 ಬಾರಿ ಪುನರಾವರ್ತಿಸಿ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.