ಟೂತ್ ಬ್ರಷ್ ಹಳೆಯದಾದ್ರೆ ನಾವೇನ್ ಮಾಡ್ತೇವೆ. ತೆಗೆದು ಕಸದ ಬುಟ್ಟಿಗೆ ಹಾಕ್ತೇವೆ. ಆದ್ರೆ ಹಾಳಾಗಿರುವ ಟೂತ್ ಬ್ರಷ್ ನಿಂದ ಅನೇಕ ಪ್ರಯೋಜನಗಳಿವೆ.
ಹಾಳಾಗಿದೆ ಎಂದು ಬಿಸಾಡುವ ಟೂತ್ ಬ್ರಷ್ ನಿಂದ ಅನೇಕ ಪ್ರಯೋಜನಗಳಿವೆ. ಕೂದಲು ಸೌಂದರ್ಯದಿಂದ ಹಿಡಿದು ಆಭರಣ ಸ್ವಚ್ಛಗೊಳಿಸಲು ಇದನ್ನು ಬಳಸಲಾಗುತ್ತದೆ.
ಕೂದಲನ್ನು ಕಲರ್ ಮಾಡುವ ಅಭ್ಯಾಸ ನಿಮಗಿದ್ದರೆ ತಕ್ಷಣ ಮನೆಯಲ್ಲಿ ಹಾಳಾಗಿದೆ ಎಂದು ಮೂಲೆಗೆ ಎಸೆದಿರುವ ಬ್ರಷ್ ಎತ್ತಿಟ್ಟುಕೊಳ್ಳಿ. ಈ ಬ್ರಷ್ ನಿಮ್ಮ ಕೂದಲಿಗೆ ಬಗೆ ಬಗೆಯ ಬಣ್ಣ ನೀಡಲು ಸಹಕಾರಿ. ಬ್ರಷನ್ನು ಬಣ್ಣದಲ್ಲಿ ಅದ್ದಿ, ಮೇಲಿನಿಂದ ಕೆಳಗಿನ ಭಾಗಕ್ಕೆ ಬಣ್ಣವನ್ನು ಹಚ್ಚಿ. ಇದರಿಂದ ನೀವು ಹಣದ ಜೊತೆ ಸಮಯವನ್ನು ಉಳಿಸಬಹುದು.
ಉಗುರಿನ ಒಳಗಿರುವ ಕೊಳಕನ್ನು ಸ್ವಚ್ಛಗೊಳಿಸಲು ಬ್ರಷ್ ಬಳಸಬಹುದು. ಉಗುರು ಉದ್ದವಾಗಿದೆ ಎಂದ ಮೇಲೆ ಅದರಲ್ಲಿ ಕೆಸರು ಸೇರಿರಲೇಬೇಕು. ಕೆಲವರು ಉಗುರು ಸ್ವಚ್ಛಗೊಳಿಸಲು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಆದ್ರೆ ಸ್ನಾನ ಮಾಡುವ ಮುನ್ನ ಬ್ರಷ್ ಮೂಲಕ ಉಗುರನ್ನು ಸ್ವಚ್ಛಗೊಳಿಸಿಕೊಳ್ಳಬಹುದು. ಬ್ರಷ್ ಮೃದುವಾಗಿರುವುದರ ಜೊತೆಗೆ ತೆಳ್ಳಗಿರುವುದರಿಂದ ಉಗುರಿನ ಒಳಗೆ ಸುಲಭವಾಗಿ ತೂರಿಕೊಳ್ಳುತ್ತದೆ.
ಐಬ್ರೋ ದಟ್ಟವಾಗಿಲ್ಲದವರು ಈ ಬ್ರಷ್ ಮೂಲಕ ಮಸಾಜ್ ಮಾಡಿಕೊಳ್ಳಬಹುದು. ಬ್ರಷ್ ಗೆ ಹರಳೆಣ್ಣೆ ಹಾಕಿಕೊಂಡು ಐಬ್ರೋ ಮೇಲೆ ನಿಧಾನವಾಗಿ ಬ್ರಷ್ ಮಾಡುತ್ತಿದ್ದರೆ ಕೂದಲು ದಟ್ಟವಾಗಿ ಬರುತ್ತದೆ.
ಆಭರಣ ಕೊಳಕಾಗಿದ್ದಾಗ ಬ್ರಷ್ ಮೂಲಕ ಸುಲಭವಾಗಿ ಸ್ವಚ್ಛಗೊಳಿಸಬಹುದು. ಮೊದಲು ಬೆಚ್ಚಗಿನ ನೀರಿನಲ್ಲಿ ಆಭರಣವನ್ನು ನೆನೆಸಿಡಿ. ನಂತರ ಬ್ರಷ್ ಮೂಲಕ ಕ್ಲೀನ್ ಮಾಡಿ.
ಬಾಚಣಿಕೆ ಕೊಳಕಾಗಿದ್ದರೆ ಕೂದಲ ಹಲವು ಸಮಸ್ಯೆಗಳು ಕಾಡುವುದು ನಿಶ್ಚಿತ, ಬ್ರಷ್ ಮೂಲಕ ಬಾಚಣಿಕೆಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
ಮನೆಯ ಟೈಲ್ಸ್ ಮಧ್ಯೆ, ಶೋಕೇಸ್, ಕಿಟಕಿ ಸಂದಿಯಲ್ಲಿರುವ ಕೊಳಕನ್ನು ತೆಗೆಯಲು ಹಳೆ ಟೂತ್ ಬ್ರಷ್ ಉಪಯೋಗಿಸಬಹುದು.