ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋಲಾರದಲ್ಲಿ ಭಾಗವಹಿಸಬೇಕಿದ್ದ ‘ಸತ್ಯಮೇವ ಜಯತೆ’ ಸಮಾವೇಶವನ್ನು ಮತ್ತೆ ಮುಂದೂಡಲಾಗಿದೆ.
ಏಪ್ರಿಲ್ 16 ರಂದು ಸಮಾವೇಶ ನಡೆಯುವ ಸಾಧ್ಯತೆ ಇದೆ. ರಾಹುಲ್ ಗಾಂಧಿಯವರಿಗೆ ಶಿಕ್ಷೆ ಪ್ರಕಟವಾಗಿ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಮೊದಲ ಸಾರ್ವಜನಿಕ ಸಭೆ ಇದಾಗಿದೆ. ಸತ್ಯಮೇವ ಜಯತೆ ಹೆಸರಿನಲ್ಲಿ ಕೋಲಾರದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಹುಲ್ ಗಾಂಧಿ ಕೋಲಾರದಲ್ಲಿ ಭಾಷಣ ಮಾಡಿದ್ದಕ್ಕಾಗಿ ಶಿಕ್ಷೆ ಹಾಗೂ ಸಂಸತ್ ಸದಸ್ಯತ್ವದಿಂದ ಅನರ್ಹರಾಗಿದ್ದು, ಅದೇ ಸ್ಥಳದಿಂದಲೇ ಸತ್ಯಮೇವ ಜಯತೆ ಯಾತ್ರೆ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಏಪ್ರಿಲ್ 9 ಅಥವಾ 10ರಂದು ಸಮಾವೇಶ ನಡೆಸಲು ರಾಹುಲ್ ಗಾಂಧಿ ಸಮಯ ನೀಡಿದ್ದರು. ಆದರೆ, ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕಾರಣ ಒಂದು ವಾರ ಸಮಾವೇಶ ಮುಂದೂಡಲಾಗಿದೆ. ಏಪ್ರಿಲ್ 16ರಂದು ಸಮಾವೇಶದ ದಿನದಂದು ಕೆಪಿಸಿಸಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.