ಬೆಂಗಳೂರು: ವಿಚ್ಛೇದಿತ ತಂದೆಗೂ ಮಗುವಿನ ಭೇಟಿಯ ಹಕ್ಕು ಇದೆ ಎಂದು ಹೇಳಿರುವ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿದೆ.
ಪತ್ನಿಯಿಂದ ವಿಚ್ಛೇದನ ಪಡೆದು ವ್ಯಕ್ತಿಯೊಬ್ಬ ಮರು ಮದುವೆಯಾಗಿದ್ದು, ಅವರಿಗೆ ಮೊದಲನೇ ಪತ್ನಿಯೊಂದಿಗೆ ಸಂಬಂಧದಿಂದ ಜನಿಸಿದ ಮಗುವಿನ ಭೇಟಿಗೆ ಕೌಟುಂಬಿಕ ನ್ಯಾಯಾಲಯ ಅವಕಾಶ ಕಲ್ಪಿಸಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಮಹಿಳೆ ಒಬ್ಬರು ವಿಚ್ಛೇದಿತ ಪತಿಗೆ ಮಗುವಿನ ಭೇಟಿಯ ಹಕ್ಕು ಕಲ್ಪಿಸಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ ಆದೇಶ ರದ್ದು ಮಾಡಬೇಕೆಂದು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಅಲೋಕ್ ಅರಾಧೆ, ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ವಿಚ್ಛೇದನ ನೀಡಿದ ನಂತರ ಪತಿ ಮತ್ತೆರಡು ಮದುವೆಯಾಗಿದ್ದು ಅಪ್ರಾಪ್ತ ಪುತ್ರಿಯನ್ನು ನೋಡಲು ಒಂದು ಸಲ ಕೂಡ ಬಂದಿರಲಿಲ್ಲ. ಹಾಗಾಗಿ ಮಗಳ ಭೇಟಿ ಮಾಡುವ ಹಕ್ಕು ನೀಡಬಾರದು ಎಂದು ಮಹಿಳೆ ಮೇಲ್ಮನವಿ ಸಲ್ಲಿಸಿದ್ದು, ಅವರ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.
ಮಹಿಳೆಯ ಪತಿ ಆಕೆಯಿಂದ ವಿಚ್ಛೇದನ ಪಡೆದುಕೊಂಡ ನಂತರ ಎರಡು ಮದುವೆಯಾಗಿದ್ದಾರೆ. ಮೊದಲನೇ ಪತ್ನಿಯಿಂದ ಹೊಂದಿದ ಮಗನೂ ಆತನ ಸುಪರ್ದಿಯಲ್ಲಿದ್ದಾನೆ. ಮೇಲ್ಮನವಿದಾರ ಮಹಿಳೆ ಅಪ್ರಾಪ್ತ ಮಗಳ ಭೇಟಿಯ ಹಕ್ಕನ್ನು ವಿಚ್ಛೇದಿತ ಪತಿಗೆ ಕಲ್ಪಿಸಿದರೆ ಮಗಳ ಯೋಗ ಕ್ಷೇಮದ ಮೇಲೆ ಪರಿಣಾಮವಾಗುತ್ತದೆ ಎನ್ನುವುದು ಅವರ ಆತಂಕವಾಗಿದೆ. ಇದನ್ನು ಪರಿಗಣಿಸಿ ಕೌಟುಂಬಿಕ ಕೋರ್ಟ್ ಅಪ್ರಾಪ್ತ ಮಗಳ ಶಾಶ್ವತ ಸುಪರ್ದಿಯನ್ನು ತಾಯಿಗೆ ನೀಡಿ, ತಂದೆಗೆ ಕೇವಲ ಭೇಟಿಯ ಹಕ್ಕು ನೀಡಿದೆ. ತಂದೆಯ ಪ್ರೀತಿ, ವಾತ್ಸಲ್ಯ, ಆರೈಕೆ ಮಗುವಿಗೆ ಅಗತ್ಯವಾಗಿದೆ. ಹೀಗಾಗಿ ಮಗುವಿನ ಭೇಟಿಯ ಹಕ್ಕನ್ನು ಕೌಟುಂಬಿಕ ನ್ಯಾಯಾಲಯ ತಂದೆಗೆ ನೀಡಿರುವುದು ಸರಿಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶ ಮಾರ್ಪಡಿಸಿ ತಿಂಗಳಲ್ಲಿ ಎರಡು ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಮಗಳ ಭೇಟಿ ಮಾಡಲು ತಂದೆಗೆ ಅವಕಾಶ ಕಲ್ಪಿಸಲಾಗಿದೆ. ಮಗಳನ್ನು ಮನೆಯಿಂದ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಂದು ಬಿಡಬೇಕು. ಈ ವೇಳೆ ಆಕೆಯ ಅಣ್ಣ ಅಂದರೆ ಮೊದಲ ಮಗ ಕೂಡ ಜೊತೆಗಿರಬೇಕು. ಶಿಕ್ಷಣ ಸೇರಿ ಮಗಳ ಎಲ್ಲಾ ಖರ್ಚು, ವೆಚ್ಚಗಳನ್ನು ವಿಚ್ಛೇದಿತ ಪತ್ನಿಗೆ ಕೊಡಬೇಕು. ಮಗಳನ್ನು ಬೇರೊಬ್ಬ ವ್ಯಕ್ತಿಯ ಜೊತೆಗೆ ಬಿಡಬಾರದು. ಆಕೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂದು ಷರತ್ತು ವಿಧಿಸಲಾಗಿದೆ.
ಮಂಗಳೂರಿನ ಮುಸ್ಲಿಂ ಮಹಿಳೆ, ಕೇರಳದ ಮುಸ್ಲಿಂ ವ್ಯಕ್ತಿ 2001 ನವೆಂಬರ್ 14ರಂದು ಮದುವೆಯಾಗಿದ್ದು, 2002ರ ಜುಲೈ 18ರಂದು ಪುತ್ರ, 2007ರ ಆಗಸ್ಟ್ 8 ರಂದು ಪುತ್ರಿ ಜನಿಸಿದ್ದರು. ನಂತರ ದಾಂಪತ್ಯದಲ್ಲಿ ಬಿರುಕು ಮೂಡಿ 2010 ನವೆಂಬರ್ 23ರಂದು ದಕ್ಷಿಣ ಕನ್ನಡ ವಿಚಾರಣಾ ನ್ಯಾಯಾಲಯ ವಿಚ್ಛೇದನ ನೀಡಿತ್ತು. ಮಗನನ್ನು ಪತಿ, ಅಪ್ರಾಪ್ತ ಮಗಳನ್ನು ಪತ್ನಿಯ ಸುಪರ್ದಿಗೆ ನೀಡಲಾಗಿತ್ತು. ಅಪ್ರಾಪ್ತ ಮಗಳನ್ನು ಕೂಡ ತನ್ನ ಸುಪರ್ದಿಗೆ ಕೊಡಬೇಕು ಎಂದು ಪತಿ ಕೌಟುಂಬಿಕ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಕೌಟುಂಬಿಕ ನ್ಯಾಯಾಲಯ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಿತ್ತು.