ಬೆಂಗಳೂರು: ಕ್ರಿಮಿನಲ್ ಮೊಕದ್ದಮೆ ದಾಖಲಾದ ಮಾತ್ರಕ್ಕೆ ವಿಚಾರಣೆ ನಡೆಸದೆ ಗ್ರಾಮ ಪಂಚಾಯಿತಿ ನೌಕರನ ವಜಾಗೊಳಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಗ್ರಾಮ ಪಂಚಾಯಿತಿ ನೌಕರ ಗಣೇಶ್ ಎಂಬವರ ಮರುನೇಮಕಕ್ಕೆ ಸೂಚಿಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆ ಅತ್ತಿಕರಿಬೆಟ್ಟು ಗ್ರಾಮ ಪಂಚಾಯಿತಿ ಸಲ್ಲಿಸಿದ್ದ ಮೇಲ್ಮನವಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.
ಉದ್ಯೋಗ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಒಬ್ಬರ ಕೆಲಸ ಕಸಿದುಕೊಳ್ಳುವುದು ಸೂಕ್ತವಲ್ಲ. ಪ್ರಕರಣದಲ್ಲಿ ಮನಬಂದಂತೆ ಕೆಲಸದಿಂದ ವಜಾ ಮಾಡಲಾಗಿದೆ. ಇದು ಅನುಚ್ಛೇದ 21ರ ಅಡಿ ಖಾತರಿಪಡಿಸಲಾದ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ವಿರುದ್ಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಅನುಚ್ಛೇದ 14ರ ಅಡಿ ವಿಚಾರಣೆಗೆ ಅವಕಾಶ ನೀಡದೆ ಸೇವೆಯಿಂದ ವಜಾಗೊಳಿಸುವ ಮೂಲಕ ಯಾವುದೇ ನೌಕರರ ಶಿಕ್ಷಿಸಲಾಗುವುದಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ನಮ್ಮದು ಕಲ್ಯಾಣ ರಾಜ್ಯವಾಗಿದೆ. ಅನುಚ್ಛೇದ 12ರ ಅಡಿ ಮಾನವೀಯ ಮೌಲ್ಯಗಳೊಂದಿಗೆ ನೌಕರರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಬೇಕು. ವಿಚಾರಣೆಯ ನಂತರ ಅಪರಾಧ ಎಸಗಿರುವುದು ಸಾಬೀತಾದಲ್ಲಿ ಕೆಲಸದಿಂದ ವಜಾ ಮಾಡಬಹುದು ಎಂದು ಹೇಳಿ ಮೇಲ್ಮನವಿ ವಜಾಗೊಳಿಸಿದೆ.