ಸರ್ಕಾರದ ಯಾವುದೇ ಯೋಜನೆಗಳು ಫಲಾನುಭವಿಗಳ ಮನೆಬಾಗಿಲಿಗೆ ಸುಲಭವಾಗಿ ತಲುಪುವುದಿಲ್ಲ ಎಂಬುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಕನ್ನಡಿ ಹಿಡಿದಿದೆ.
ಒಡಿಶಾದ ಕಿಯೋಂಜಾರ್ ಜಿಲ್ಲೆಯ 70 ವರ್ಷದ ಅಂಗವಿಕಲ ಮಹಿಳೆಯೊಬ್ಬರು ತಮ್ಮ ವೃದ್ಧಾಪ್ಯ ಪಿಂಚಣಿ ಪಡೆಯಲು ಸ್ಥಳೀಯ ಪಂಚಾಯತ್ ಕಚೇರಿಗೆ ಸುಮಾರು ಎರಡು ಕಿಲೋಮೀಟರ್ ತೆವಳಿಕೊಂಡು ಹೋಗಿದ್ದಾರೆ. ಮಹಿಳೆ ನೋವಿನಿಂದ ತೆವಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯ ಆಡಳಿತದ ವಿರುದ್ಧ ಟೀಕೆ ವ್ಯಕ್ತವಾಗಿದೆ.
ಪಥೂರಿ ದೆಹುರಿ ಎಂದು ಗುರುತಿಸಲಾದ ವೃದ್ಧೆ ತನ್ನ ಜೀವನೋಪಾಯಕ್ಕಾಗಿ ಪಿಂಚಣಿಯ ಮೇಲೆ ಅವಲಂಬಿತವಾಗಿದ್ದಾರೆ. ಅಪಘಾತದಿಂದ ಉಂಟಾದ ಅಂಗವೈಕಲ್ಯದಿಂದಾಗಿ ಸರಿಯಾಗಿ ನಡೆಯಲು ಸಾಧ್ಯವಾಗದ ವೃದ್ಧೆಗೆ ಕುಟುಂಬಸ್ಥರಿಲ್ಲ. ಪಿಂಚಣಿಯನ್ನು ತನ್ನ ಮನೆಗೆ ಯಾರೂ ತಲುಪಿಸದ ಕಾರಣ, ಪಿಂಚಣಿ ಪಡೆಯಲು ಕಿಯೋಂಜಾರ್‌ನ ಟೆಲ್ಕೊಯ್ ಬ್ಲಾಕ್‌ನ ರೈಸುವಾನ್ ಪಂಚಾಯತ್‌ಗೆ ತೆವಳಿಕೊಂಡೇ ಹೋಗಿದ್ದಾರೆ.
ಗಮನಾರ್ಹವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ಪಿಂಚಣಿ ವಿತರಿಸುವುದನ್ನು ಖಾತ್ರಿಪಡಿಸುವಂತೆ ಸರ್ಕಾರದ ನಿರ್ದೇಶನಗಳಿವೆ. ಆದರೆ ವೃದ್ಧೆ ಪಿಂಚಣಿಗಾಗಿ ತೆವಳಿಕೊಂಡು ಬಂದಿದ್ದು ಅವರ ಪಾದ, ಮೊಣಕಾಲು ಮತ್ತು ಕೈಗಳಲ್ಲಿ ಗುಳ್ಳೆಗಳು ಉಂಟಾಗಿವೆ.
‘‘ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ (ಪಿಇಒ) ಪಿಂಚಣಿ ಪಡೆಯಲು ಕಚೇರಿಗೆ ಬರುವಂತೆ ಹೇಳಿದರು. ಬೇರೆ ದಾರಿಯಿಲ್ಲದೆ ಪಂಚಾಯಿತಿ ಕಚೇರಿಗೆ ಬರಲು 2 ಕಿ.ಮೀ ತೆವಳಬೇಕಾಯಿತು. ನನಗೆ ಯಾರೂ ಇಲ್ಲ” ಎಂದು ವೃದ್ಧೆ ಹೇಳಿದರು.
ಈ ಬಗ್ಗೆ ಪ್ರಶ್ನಿಸಿದಾಗ, ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಘಟನೆಯನ್ನು ಒಪ್ಪಿಕೊಂಡು ಮಹಿಳೆಯ ಸ್ಥಿತಿಯ ಬಗ್ಗೆ ತಿಳಿದಿರಲಿಲ್ಲ ಎಂದಿದ್ದಾರೆ. “ಅವರು ಮೊದಲು ತನ್ನ ಪಿಂಚಣಿಯನ್ನು ಕಚೇರಿಯಿಂದ ಪಡೆಯುತ್ತಿದ್ದರು. ಆದರೆ ಅಪಘಾತದ ನಂತರ ಅವರ ಕಾಲಿಗೆ ಹಾನಿಯಾಗಿದೆ. ಈ ಬಗ್ಗೆ ತಿಳಿದಿರಲಿಲ್ಲ, ಅವರ ಕುಟುಂಬದ ಸದಸ್ಯರು ಅಥವಾ ನಮ್ಮ ಕಚೇರಿಯ ಸಿಬ್ಬಂದಿ ಪಿಂಚಣಿಯನ್ನು ಅವರ ಮನೆಗೆ ತಲುಪಿಸುತ್ತಾರೆ” ಎಂದು ಅಧಿಕಾರಿ ವಿವರಿಸಿದರು.
ಘಟನೆಗೆ ಪ್ರತಿಕ್ರಿಯಿಸಿದ ರೈಸುವಾನ್ ಪಂಚಾಯತ್‌ನ ಸರಪಂಚ್ ವಿಷಾದ ವ್ಯಕ್ತಪಡಿಸಿ, ಮಹಿಳೆಯ ಪರಿಸ್ಥಿತಿಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
‘‘ವಯೋವೃದ್ಧೆ ಕಚೇರಿಗೆ ತೆವಳಿಕೊಂಡು ಹೋಗಬೇಕಾಗಿರುವುದು ನಮಗೆ ತಿಳಿದಿರಲಿಲ್ಲ, ಇತ್ತೀಚೆಗೆ ಅಪಘಾತಕ್ಕೀಡಾಗಿದ್ದರಿಂದ ನಡೆದಾಡಲು ತೊಂದರೆಯಾಗಿರಬಹುದು. ಪ್ರತಿ ತಿಂಗಳ 15ನೇ ತಾರೀಖಿನೊಳಗೆ ಅವರ ಮನೆಗೆ ಪಿಂಚಣಿ ಮತ್ತು ಪಡಿತರವನ್ನು ತಲುಪಿಸಲು ನಾವು ಈಗಾಗಲೇ ನಿರ್ಧರಿಸಿದ್ದೇವೆ. ” ಎಂದು ಸರಪಂಚ್ ಹೇಳಿದರು. ಸರ್ಕಾರದ ನಿಬಂಧನೆಗಳ ಪ್ರಕಾರ ವೃದ್ಧೆಗೆ ಶೀಘ್ರದಲ್ಲೇ ಗಾಲಿಕುರ್ಚಿ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.